– ʻಮಲೆ ಮಹದೇಶ್ವರ ಹುಲಿ ಸಂರಕ್ಷಿತ ಪ್ರದೇಶʼ ಪ್ರಸ್ತಾವನೆ ಮುನ್ನೆಲೆಗೆ
– ಸ್ಥಳೀಯರೊಂದಿಗೆ ಸಭೆ ನಡೆಸಿ ವರದಿ ಸಲ್ಲಿಸಲು ಈಶ್ವರ ಖಂಡ್ರೆ ಸೂಚನೆ
ಬೆಂಗಳೂರು/ಚಾಮರಾಜನಗರ: ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ (Malai Mahadeshwara Wildlife Sanctuary) ಮತ್ತೊಂದು ಹುಲಿ ಹತ್ಯೆ ಆಗಿರುವ ಹಿನ್ನೆಲೆಯಲ್ಲಿ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೆ ಸ್ಥಳೀಯರೊಂದಿಗೆ ಸಭೆ ನಡೆಸಿ ವರದಿ ಸಲ್ಲಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwar Khandre) ತಿಳಿಸಿದರು.
ರಾಜ್ಯದ ಎಲ್ಲ ಹುಲಿ ಸಂರಕ್ಷಿತ ಪ್ರದೇಶ (Tiger Reserve Forest) ಹಾಗೂ ಮೈಸೂರು ವಿಭಾಗದ ಅರಣ್ಯಾಧಿಕಾರಿಗಳೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿದ ಸಚಿವರು, ಈಗಾಗಲೇ ವನ್ಯಜೀವಿ ಮಂಡಳಿ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೆ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅಂತಿಮ ವರದಿ ಸಲ್ಲಿಸಲು ತಿಳಿಸಿದರು.
ಅರಣ್ಯ ಪ್ರದೇಶದೊಳಗೆ ಇರುವ ಹಾಡಿಗಳಲ್ಲಿರುವ ದನಕರುಗಳೆಷ್ಟು? ಈ ಹಾಡಿಗಳಲ್ಲಿ ಎಷ್ಟು ಜನರಿದ್ದಾರೆ? ಎಂಬ ಬಗ್ಗೆ ಸಂಪೂರ್ಣ ದತ್ತಾಂಶ ಕಲೆ ಹಾಕಿ ದಾಖಲಿಸಲು ಮತ್ತು ಒಂದೊಮ್ಮೆ ಹಾಡಿಯಲ್ಲಿರುವ ದನಕರುಗಳು ವನ್ಯಜೀವಿಯಿಂದ ಮೃತಪಟ್ಟರೆ (Wild Animal Death) ಪರಿಹಾರ ನೀಡಲು ಕ್ರಮ ವಹಿಸುವಂತೆ ಸೂಚಿಸಿದರು.
ಜಾಗೃತಿ ಮೂಡಿಸಿ:
ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮದ ಅಂಚಿನ ಗ್ರಾಮಗಳಲ್ಲಿ ಮತ್ತು ಅರಣ್ಯದ ಹಾಡಿಯ ಬಳಿ ವನ್ಯಜೀವಿಗಳಿಗೆ ವಿಷ ಹಾಕುತ್ತಿರುವ ಘಟನೆಗಳು ಮತ್ತು ಕಳ್ಳಬೇಟೆ ಪ್ರಕರಣಗಳು ವರದಿಯಾಗುತ್ತಿದ್ದು, ಅರಣ್ಯವಾಸಿಗಳು ಮತ್ತು ಕಾಡಿನಂಚಿನ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುವಂತೆ ಹಾಗೂ ವನ್ಯಜೀವಿಗಳಿಂದ ಬೆಳೆ ಹಾನಿ ಆಗಿದ್ದಲ್ಲಿ ಪರಿಶೀಲಿಸಿ, ಪರಿಹಾರ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶಂಕಿತರಿಬ್ಬರು ವಶಕ್ಕೆ:
ಹುಲಿಯನ್ನು ಮೂರು ಭಾಗವಾಗಿ ಕತ್ತರಿಸಿ ಹತ್ಯೆ ಮಾಡಿರುವ ಪ್ರಕರಣದ ಇಬ್ಬರು ಶಂಕಿತರನ್ನ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆದಿದ್ದು, ಶೀಘ್ರವೇ ಹುಲಿ ಹತ್ಯೆಗೆ ನೈಜ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಮಲೆ ಮಹದೇಶ್ವರ ಅರಣ್ಯ ಭಾಗದಲ್ಲಿ ಗಸ್ತು ಹೆಚ್ಚಿಸಲು ಸೂಚಿಸಿದ ಸಚಿವರು, ಅಧಿಕಾರಿಗಳು ಕರ್ತವ್ಯಲೋಪ ಎಸಗಿದರೆ ಕ್ರಮಕ್ಕೆ ಶಿಫಾರಸು ಮಾಡುವಂತೆ ಹಾಗೂ 5 ಹುಲಿ ಹಾಗೂ ಮೊನ್ನೆ ನಡೆದಿರುವ ಹುಲಿ ಹತ್ಯೆಯ ಆರೋಪಿಗಳಿಗೆ ಶೀಘ್ರ ಶಿಕ್ಷೆ ಕೊಡಿಸಲು ಕ್ರಮಕೈಗೊಂಡು ಸ್ಪಷ್ಟ ಸಂದೇಶ ರವಾನಿಸಲು ಸೂಚಿಸಿದರು.
ಮೂಲಸೌಕರ್ಯ ಒದಗಿಸಲು ಸೂಚನೆ:
ಹೊರಗುತ್ತಿಗೆಯ ಮುಂಚೂಣಿ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿ ಆಗುತ್ತಿದೆಯೇ ಇಲ್ಲವೇ, ಇವರು ಸರಿಯಾಗಿ ಗಸ್ತು ನಡೆಸುತ್ತಿದ್ದಾರೋ ಇಲ್ಲವೋ, ಎಂಸ್ಟ್ರೈಪ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಸಚಿವರು ಸೂಚಿಸಿದರು.
ಸಿಬ್ಬಂದಿ ಗಸ್ತು ತಿರುಗುತ್ತಿರುವ ಕುರಿತಂತೆ ಜಿಪಿಎಸ್ ಸಹಿತ ಫೋಟೋ ತೆಗೆಯಲು ಸೂಚಿಸಿ, ಅದನ್ನು ಹಿರಿಯ ಅಧಿಕಾರಿಗಳು ಆಗಾಗ್ಗೆ ಪರಾಮರ್ಶಿಸಬೇಕು, ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದೂ ಈಶ್ವರ ಖಂಡ್ರೆ ತಿಳಿಸಿದರು. ಕಳ್ಳಬೇಟೆ ನಿಗ್ರಹ ಶಿಬಿರಗಳಲ್ಲಿರುವ ಸಿಬ್ಬಂದಿಗೆ ಬೂಟು, ಜಾಕೆಟ್, ಕುಡಿಯುವ ನೀರು, ಆಹಾರ ಧಾನ್ಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲೂ ಸಚಿವರು ಸೂಚನೆ ನೀಡಿದರು.
ಚನ್ನಪಟ್ಟಣ ಆನೆ ಸಾವಿನ ಬಗ್ಗೆ ಪರಾಮರ್ಶೆ:
ಚನ್ನಪಟ್ಟಣದ ಗೊಲ್ಲರದೊಡ್ಡಿಯ ಬಳಿ ಇಂದು ತೆಂಗಿನಮರದ ಹೊಂಬಾಳೆ ತಿನ್ನಲು ಯತ್ನಿಸಿದ ಆನೆಯೊಂದು ಪಕ್ಕದಲ್ಲಿದ್ದ ವಿದ್ಯುತ್ ಕಂಬದ ತಂತಿ ಸ್ಪರ್ಶದಿಂದ ಮೃತಪಟ್ಟಿರುವ ಕುರಿತಂತೆಯೂ ಸಭೆಯಲ್ಲಿ ಪರಾಮರ್ಶಿಸಲಾಯಿತು. ಪ್ರತಿವರ್ಷ ಸರಾಸರಿ ವಿದ್ಯುತ್ ಸ್ಪರ್ಶದಿಂದ 14 ಆನೆಗಳು ಮೃತಪಡುತ್ತಿವೆ. ಆದ್ರೆ ಈ ವರ್ಷ 7 ಆನೆಗಳು ಮಾತ್ರ ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿವೆ. ರೈತರಿಗೆ, ತೋಟದ ಮಾಲೀಕರಿಗೆ ಬೇಲಿಯ ತಂತಿಗೆ ಅಕ್ರಮವಾಗಿ ವಿದ್ಯುತ್ ಹರಿಸದಂತೆ ಮನವಿ ಮಾಡಲಾಗಿದೆ. ತಪಾಸಣೆ ನಡೆಲಾಗುತ್ತಿದೆ ಎಂದೂ ಸಭೆಗೆ ಅಧಿಕಾರಿಗಳು ತಿಳಿಸಿದರು.
ಆನೆಗಳು ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗದಂತೆ ಹಾಗೂ ಅರಣ್ಯ ಪ್ರದೇಶದಲ್ಲಿ ಅಥವಾ ಅರಣ್ಯದಂಚಿನಲ್ಲಿ ತೂಗಾಡುತ್ತಿರುವ ಅಥವಾ ಜೋತು ಬಿದ್ದಿರುವ ವಿದ್ಯುತ್ ತಂತಿಯ ದುರಸ್ತಿ ಮಾಡುವಂತೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪತ್ರ ಬರೆದು ಕ್ರಮ ವಹಿಸಲು ಸೂಚಿಸುವಂತೆ ತಿಳಿಸಿದರು.
ಸಭೆಯಲ್ಲಿ ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಪಿ.ಸಿ. ರೇ ಮತ್ತಿತರರು ಪಾಲ್ಗೊಂಡಿದ್ದರು.