ಮೈಸೂರು: ನಗರದ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ನಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ಪ್ರವಾಸಿಗರಲ್ಲಿ ಆತಂಕ ಮೂಡಿದೆ.
ಎಚ್.ಡಿ.ಕೋಟೆ ತಾಲೂಕಿನ ಕಾರಾಪುರದಲ್ಲಿರುವ ರೆಸಾರ್ಟ್‍ನಲ್ಲಿ ಕಳೆದ ರಾತ್ರಿ ರೆಸಾರ್ಟ್ ಮೈದಾನದಲ್ಲಿ ಹುಲಿ ಪ್ರತ್ಯಕ್ಷಗೊಂಡಿದೆ. ಪ್ರವಾಸಿಗರು ಮತ್ತು ಗ್ರಾಮಸ್ಥರು ಭಯಬೀತರಾಗಿ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ. ಆದರೆ ಹುಲಿ ರೆಸಾರ್ಟ್‍ನಲ್ಲೇ ಬೀಡು ಬಿಟ್ಟಿರುವ ಶಂಕೆ ಇದ್ದು, ತಕ್ಷಣ ಜನರು ಅರಣ್ಯ ಇಲಾಖೆಗೆ ಕರೆ ಮಾಡಿ ತಿಳಿಸಿದ್ದಾರೆ.
ಮಾಹಿತಿ ತಿಳಿದ ಅರಣ್ಯಾಧಿಕಾರಿಗಳು ತಕ್ಷಣ ಸ್ಥಳಕ್ಕೆ ದೌಡಾಯಿಸಿದ್ದು, ಸಾಕಾನೆ ಬಳಸಿ ಹುಲಿ ಸೆರೆಗೆ ಪ್ರಯತ್ನ ಮಾಡುತ್ತಿದ್ದಾರೆ. ಸದ್ಯಕ್ಕೆ ಹುಲಿಯಿಂದ ಯಾವುದೇ ರೀತಿಯ ಯಾರಿಗೂ ಅಪಾಯ ಸಂಭವಿಸಿಲ್ಲ.
ಹುಲಿ ಪ್ರತ್ಯಕ್ಷದಿಂದ ರೆಸಾರ್ಟ್ ಬಳಿ ಜನರು ಸೇರಿರುವುದರಿಂದ ಕಾರ್ಯಾಚರಣೆ ಕಷ್ಟವಾಗಿದ್ದು, ಆದ್ದರಿಂದ ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನು ಸ್ಥಗಿತ ಮಾಡಬೇಕು. ಸಂಜೆ ವೇಳೆಗೆ ಹುಲಿಯನ್ನು ಸೆರೆ ಹಿಡಿಯುವ ಬದಲು ಕಾಡಿಗೆ ವಾಪಸ್ ಕಳುಹಿಸುವ ಚಿಂತನೆ ಮಾಡಲಾಗಿದೆ ಎಂದು ಎಸಿಎಫ್ ಪೂವಯ್ಯ ಅವರು ಮಾಹಿತಿ ನೀಡಿದ್ದಾರೆ.