ಚಾಮರಾಜನಗರ: ಕಳೆದ ಒಂದು ವಾರದಿಂದ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಸುತ್ತ ಮುತ್ತ ಕಾಣಿಕೊಳ್ಳುತ್ತಿರುವ ಹುಲಿಯ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಹುಲಿ ಪ್ರತ್ಯಕ್ಷವಾಗಿ ಜನರನ್ನು ಬೆಚ್ಚಿ ಬೀಳಿಸಿದೆ.
ಬೇಸಿಗೆ ಕಾಲ ಸಮೀಸುತ್ತಿರುವ ಕಾರಣಕ್ಕೆ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಗ್ರಾಮದ ಗ್ರಾಮಸ್ಥರಿಗೆ ಹುಲಿ ಭಯ ಹೆಚ್ಚಾಗುತ್ತಿದೆ. ಗುಂಡ್ಲುಪೇಟೆ ತಾಲೂಕಿನ ಹುಂಡಿಪುರ ಗ್ರಾಮದ ಬಳಿ ಇದೀಗ ಮತ್ತೊಂದು ಹುಲಿ ಪ್ರತ್ಯಕ್ಷವಾಗಿದೆ. ಕಳೆದ ರಾತ್ರಿ ಹುಂಡಿಪುರದ ಬಳಿ ನಾಯಿಯೊಂದನ್ನು ಹುಲಿ ತಿಂದು ಹೋಗಿದ್ದು, ಹುಲಿಯ ಹೆಜ್ಜೆ ಗುರುತು ಗ್ರಾಮದ ಸುತ್ತ ಮುತ್ತ ಕಾಣಿಸಿಕೊಂಡಿದೆ. ಇದನ್ನು ಕಂಡು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಒಂದೆಡೆ ಅರಣ್ಯ ಇಲಾಖೆ ಸಿಬ್ಬಂದಿ ಹಂಗಳ ಗ್ರಾಮದ ಬಳಿ ಅಭಿಮನ್ಯು, ಜಯಪ್ರಕಾಶ ಮತ್ತು ಕೃಷ್ಣ ಆನೆಗಳನ್ನು ಬಳಸಿಕೊಂಡು ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದರೆ, ಇನ್ನೊಂದೆಡೆ ಇದೀಗ ಹುಂಡಿಪುರ ಗ್ರಾಮದಲ್ಲಿ ಮತ್ತೊಂದು ಹುಲಿ ಕಾಣಿಸಿಕೊಂಡಿರುವುದು ಅರಣ್ಯ ಇಲಾಖೆ ಸಿಬ್ಬಂದಿಗೆ ತಲೆ ನೋವು ತಂದಿದೆ.
ಬೇಸಿಗೆ ಕಾಲದಲ್ಲಿ ಆಹಾರ ಹಾಗೂ ನೀರಿನ ಸಮಸ್ಯೆ ಇರುವ ಕಾರಣಕ್ಕೆ ಹುಲಿಗಳು ಕಾಡಂಚಿನ ಗ್ರಾಮಗಳಿಗೆ ಬರುತ್ತಿವೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv