ಕರಾವಳಿಯೆಂದರೆ ಸಾಕು ಮೊದಲು ನೆನಪಾಗುವುದು ಹುಲಿಕುಣಿತ, ಯಕ್ಷಗಾನ. ನವರಾತ್ರಿ ಬಂತೆಂದರೆ ಸಾಕು ಮಂಗಳೂರಿನ (Mangaluru) ಎಲ್ಲೆಡೆ ಮಾರ್ನೆಮಿ ಹುಲಿಗಳದ್ದೇ ಹವಾ. ತುಳುನಾಡಿನ ಸಂಪ್ರದಾಯಗಳಲ್ಲಿ ಒಂದಾದ ಹುಲಿ ವೇಷ (ಪಿಲಿ ವೇಷ) ಮಂಗಳೂರು ದಸರಾದಲ್ಲಿ (Mangaluru Dasara) ಪ್ರಮುಖ ಆಕರ್ಷಣೆಯಾಗಿದೆ. ಬನ್ನಿ ಹುಲಿವೇಷದ (Tiger Dance) ಇತಿಹಾಸವನ್ನು ನಾವು ತಿಳಿದುಕೊಳ್ಳೋಣ.
ಕರಾವಳಿಯಲ್ಲಿ ಹಿಂದಿನಿಂದಲೂ ನವರಾತ್ರಿ ಸಮಯದಲ್ಲಿ ವಿವಿಧ ವೇಷಗಳನ್ನು ಧರಿಸಿ ಹಾಕಿಕೊಂಡು ಊರೂರು ಸುತ್ತಿಕೊಂಡು, ಮನೆ ಮನೆಗಳಿಗೆ ಹೋಗುವ ಪದ್ಧತಿ. ಕರಾವಳಿ ತುಂಬೆಲ್ಲಾ ನವರಾತ್ರಿ ಹಬ್ಬದ ಸಮಯದಲ್ಲಿ ಮಾರ್ನೆಮಿ ವೇಷಗಳೇ ಕಾಣಸಿಗುತ್ತವೆ. ಮಂಗಳೂರು, ಉಡುಪಿ ಜಿಲ್ಲೆಯಲ್ಲಿ ಹುಲಿ ವೇಷದ ಅನೇಕ ತಂಡಗಳಿದ್ದು, ಇವುಗಳು ನವರಾತ್ರಿ ಸಮಯದಲ್ಲಿ ಸಕ್ರಿಯವಾಗಿರುತ್ತದೆ. ಆಹ್ವಾನಿತರ ಮನೆಗಳಿಗೆ ತೆರಳಿ ನರ್ತಿಸುವ ದೊಡ್ಡ ದೊಡ್ಡ ಹುಲಿ ವೇಷ ತಂಡಗಳಿವೆ.
Advertisement
Advertisement
ನವರಾತ್ರಿಯ ಸಮಯದಲ್ಲಿ ವಿವಿಧ ಸಂಘಟನೆಗಳು ಪಿಲಿ ನಲಿಕೆ ಕಾರ್ಯಕ್ರಮಗಳನ್ನು ಸ್ಪರ್ಧೆಗಳನ್ನು ಆಯೋಜಿಸುತ್ತಾರೆ. ಇಲ್ಲಿ ವಿವಿಧ ಭಾಗಗಳಿಂದ ಪ್ರತಿಷ್ಠಿತ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ. ಒಂದೊಂದು ಹುಲಿ ವೇಷ ತಂಡದಲ್ಲಿರುವ ಯುವಕರು ಮತ್ತು ಸಣ್ಣ ಮಕ್ಕಳು ಹುಲಿಯ ಬಣ್ಣ ಹಚ್ಚಿ ಚೆಂಡೆ ಮತ್ತು ಡೋಲಿನ ತಾಳಕ್ಕೆ ಲಯಕ್ಕೆ ತಕ್ಕಂತೆ ಗಾಂಭೀರ್ಯದಿಂದ ಕುಣಿಯುತ್ತಾರೆ. ಇದನ್ನು ನೋಡುವುದೇ ಚಂದ. ಪ್ರತೀ ತಂಡದಲ್ಲಿ ಸುಮಾರು 25 ಕ್ಕೂ ಹೆಚ್ಚು ವೇಷಧಾರಿಗಳಿರುತ್ತಾರೆ. ನಾನಾ ರೀತಿಯಲ್ಲಿ ಪಲ್ಟಿಗಳನ್ನು ಹೊಡೆಯುವುದು, ಭಿನ್ನ ವಿಭಿನ್ನ ವೇಷಗಳನ್ನು ಹಚ್ಚುತ್ತಾರೆ. ನೆಲದಲ್ಲಿ ಬಿದ್ದ ನಾಣ್ಯ ಅಥವಾ ನೋಟುಗಳನ್ನು ಹಿಮ್ಮುಖವಾಗಿ ತೆಗೆಯುವುದು, ಅಕ್ಕಿ ಮೂಟೆಗಳನ್ನು ಬಾಯಲ್ಲಿ ಕಚ್ಚಿ ಎತ್ತಿ ಬಿಸಾಡುವಂತಹ ವಿವಿಧ ರೀತಿಯ ಕಸರತ್ತು, ತಾಯಿ ಹುಲಿ, ಮಗು ಹುಲಿ ಹೀಗೆ ನಾನಾ ತರಹದ ವೇಷಗಳನ್ನು ಕಾಣಬಹುದು.
Advertisement
ಹುಲಿ ವೇಷವನ್ನು ಹಾಕುವ ಹಿಂದೆ ಐಹಿತ್ಯವಿದೆ:
ಹಲವು ವರ್ಷಗಳ ಹಿಂದೆ ದೈಹಿಕ ಸಮಸ್ಯೆಯ ಕಾರಣ ಬಾಲಕನೊಬ್ಬನಿಗೆ ಕಾಲುಗಳಿದ್ದರೂ ನಡೆಯುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಆತನ ತಾಯಿ ಮಂಗಳೂರಿನ ಮಂಗಳಾದೇವಿ ದೇವಾಲಯಕ್ಕೆ ಬಂದು ಭಕ್ತಿಯಿಂದ ಕೈ ಮುಗಿದು, ನನ್ನ ಮಗು ಗುಣಮುಖವಾಗಿಸು ಆತ ನಡೆದಾಡುವಂತೆ ಮಾಡು. ಹುಷಾರಾದರೆ ಮುಂದಿನ ವರ್ಷ ನವರಾತ್ರಿ ಹಬ್ಬಕ್ಕೆ ಮಗುವಿಗೆ ಹುಲಿ ವೇಷ ಹಾಕಿಸಿ ನಿನ್ನ ಸಾನಿಧ್ಯದಲ್ಲಿ ಮಗುವಿಗೆ ಹುಲಿವೇಷ ಹಾಕಿ ಕುಣಿಸಿ ಹರಕೆ ರೂಪದಲ್ಲಿ ಸಲ್ಲಿಸುವುದಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ. ಇದಾದ ಕೆಲ ದಿನ ಕಳೆದನಂತರ ಆ ಬಾಲಕ ಸಂಪೂರ್ಣವಾಗಿ ಗುಣಮುಖವಾಗಿ ನಡೆದಾಡಲು ಪ್ರಾರಂಭಿಸಿದ. ತಾಯಿ ಕೊಟ್ಟ ಮಾತಿನಂತೆ ಮರು ವರ್ಷವೇ ನವರಾತ್ರಿ ಸಮಯದಲ್ಲಿ ಮಗನಿಗೆ ಹುಲಿ ವೇಷವನ್ನು ಹಾಕಿಸಿ ಮಂಗಳಾದೇವಿ ದೇವಾಲಯದಲ್ಲಿ ಪಿಲಿನಲಿಕೆಯ ಹರಕೆಯನ್ನು ತೀರಿಸುತ್ತಾರೆ. ಅಂದಿನಿಂದ ಇಂದಿನವರೆಗೂ ನವರಾತ್ರಿಯ ಸಂದರ್ಭದಲ್ಲಿ ಯುವಕರಿದಂದ ಹಿಡಿದು ಪುಟ್ಟ ಮಕ್ಕಳವರೆಗೆ ಭಕ್ತಿಯಿಂದ ಹುಲಿವೇಷವನ್ನು ಧರಿಸುವ ಸಂಪ್ರದಾಯ ಸಾಗುತ್ತಾ ಬಂದಿದೆ. ಹೀಗಾಗಿ ಹರಕೆಯ ರೂಪವಾಗಿ, ಸಂಕಲ್ಪಕ್ಕಾಗಿ, ಇಷ್ಟಾರ್ಥ ಸಿದ್ಧಿಗಾಗಿ, ಸೇವೆ ಹೀಗೆ ನಾನಾ ಭಕ್ತಿ ಭಾವದ ಕಾರಣದಿಂದ ಹುಲಿ ವೇಷ ಧರಿಸುತ್ತಾರೆ.
Advertisement
ವಿವಿಧ ಪ್ರಕಾರದ ಕುಲಿ ವೇಷಗಳು:
ಹುಲಿವೇಷದಲ್ಲಿ ಪಟ್ಟೆ ಹುಲಿ ಮತ್ತು ಚಿಟ್ಟೆ ಹುಲಿ ಎಂಬ ಎರಡು ಪ್ರಕಾರದ ವೇಷಗಳಿವೆ. ಪಟ್ಟೆ ಹುಲಿಗೆ ಹುಲಿಯ ಮೇಲಿರುವ ಪಟ್ಟೆ ಅಥವಾ ಗೆರೆಗಳ ಆಕಾರವನ್ನು ಬಿಡಿಸಲಾಗುತ್ತದೆ. ಚಿಟ್ಟೆ ಎಂದರೆ ಹುಲಿಯ ದೇಹದ ಮೇಲೆ ಚಿರತೆಯ ಮೈ ಮೇಲೆ ಇರುವ ಹಾಗೆ ಚುಕ್ಕಿಯಾಕಾರವನ್ನು ಬಿಡಿಸಲಾಗುತ್ತದೆ. ಇತ್ತೀಚಿಗೆ ಕರಿ ಪಿಲಿ ಕೂಡಾ ಬಾರಿ ಹೆಸರುವಾಸಿಯಗಿದೆ. ಕಪ್ಪು ಹುಲಿ ವೇಷಧಾರಿಗೆ ಕಪ್ಪುಬಣ್ಣವನ್ನು ಹಾಕಿ ಅದರ ಮೇಲೆ ಬಿಳಿ ಬಣ್ಣದ ಚುಕ್ಕೆಗಳನ್ನು ಬಿಡಿಸುತ್ತಾರೆ. ಹಿಂದೆಲ್ಲಾ ರಾತ್ರಿಯಿಂದ ಬೆಳಗ್ಗಿನವರೆಗೆ ವೇಷಧಾರಿಗಳಿಗೆ ಬಣ್ಣ ಹಚ್ಚಲಾಗುತ್ತಿತ್ತು. ಆದರೆ ಈಗ ಸ್ಪ್ರೇ ಇತ್ಯಾದಿ ಆಧುನಿಕ ಸೌಲಭ್ಯಗಳಿರುವ ಕಾರಣ 2 ರಿಂದ 3 ಗಂಟೆಯ ಒಳಗೆ ಬಣ್ಣ ಹಚ್ಚಲಾಗುತ್ತದೆ. ಹಿಂದಿನ ಕಾಲದಲ್ಲಿ ಒಂದು ತಿಂಗಳು ಅಥವಾ ಒಂದು ವಾರ ಇರುವಾಗ ಹಿಂದೆಲ್ಲಾ ಬಣ್ಣ ತಯಾರಿಸಲು ಪ್ರಾರಂಭಿಸುತ್ತಿದ್ದರು. ಅರಶಿನ, ಇದ್ದಿಲು ಸೇರಿಸಿ ಅರೆದು ಆ ಬಣ್ಣಕ್ಕೆ ಹೊಳಪು ಬರಲು ಮೊಟ್ಟೆಯ ಸಿಪ್ಪೆಯನ್ನು ಪುಡಿ ಮಾಡಿ ಹಾಕಿ, ಚೆನ್ನಾಗಿ ಕುದಿಸಿ ಬಣ್ಣಗಳನ್ನು ತಯಾರಿಸುತ್ತಿದ್ದರು. ಈ ಬಣ್ಣ ವಿಪರೀತ ಉರಿಯಿಂದ ಕೂಡಿತ್ತು ಮಾತ್ರವಲ್ಲದೆ ಮೈಗೆ ಹಚ್ಚಿದ ಈ ಬಣ್ಣ ಅಷ್ಟು ಸುಲಭವಾಗಿ ಮಾಸುತ್ತಿರಲಿಲ್ಲ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಸ್ಪ್ರೇ ಇತ್ಯಾದಿ ಸುಲಭ ವಿಧಾನದ ಮೂಲಕ ಬಣ್ಣ ಹಚ್ಚುತ್ತಾರೆ.
ಹುಲಿವೇಷಧಾರಿಗಳಿಗೆ ಬಣ್ಣ ಬಳಿದ ಮೇಲೆ ಬಿಳಿ ಬಣ್ಣದ ಜೆಟ್ಟಿ ಉಡುಪನ್ನು ಸೊಂಟಕ್ಕೆ ಕಟ್ಟಲಾಗುತ್ತದೆ. ಸುಮಾರು ಆರು ಇಂಚು ಅಗಲ ಮತು 12 ರಿಂದ 14 ಅಡಿ ಉದ್ದವಿರುತ್ತದೆ. ಅದನ್ನು ಹುಲಿಯ ಬಾಲದ ರೀತಿಯಲ್ಲಿ ಕಟ್ಟಲಾಗುತ್ತದೆ. ವೇಷಾಧಾರಿಗಳು ಹುಲಿ ಕುಣಿತಕ್ಕೆ ಅಣಿಯಾಗುವ ಮೊದಲು ‘ಲೋಬನ ಸೇವೆ’ಯನ್ನು ಮಾಡಲಾಗುತ್ತದೆ. ಹೀಗೆ ಲೋಬನ ಸೇವೆಯ ಬಳಿಕ ಮನೆಮನೆಗಳಿಗೆ ಹೋಗಿ, ನಗರದ ಬೀದಿಗಳಲ್ಲಿ ಹುಲಿವೇಷಧಾರಿಗಳು ತಾಸೆ ಸದ್ದಿಗೆ ಭರ್ಜರಿಯಾಗಿ ಹುಲಿ ಕುಣಿತ ಸೇವೆಯನ್ನು ಮಾಡುತ್ತಾರೆ.
ಹುಲಿ ಕುಣಿತಕ್ಕೆ ಅದರದ್ದೇ ಆದ ನೃತ್ಯ ಪ್ರಕಾರವಿದೆ. ಆದರೆ ತೀರಾ ಇತ್ತೀಚಿಗೆ ಹುಲಿ ಕುಣಿತ ವಿವಿಧ ನೃತ್ಯ ಶೈಲಿಯನ್ನು ಪಡೆದುಕೊಳ್ಳುತ್ತಿದೆ. ಕಲೆಯನ್ನು ಉಳಿಸುವುದು ಬೆಳೆಸುವುದು ಎರಡೂ ನಮ್ಮ ಕೈಯಲ್ಲಿದೆ. ಹೀಗಾಗಿ ಎಲ್ಲಾ ಕಲೆಯನ್ನು ಗೌರವಿಸೋಣ ಉಳಿಸಿ ಬೆಳೆಸೋಣ.