ಬಿಗ್ ಬಾಸ್ (Big Boss) ಮಾಜಿ ಸ್ಪರ್ಧಿ ಆರ್ಯವರ್ಧನ್ ಗುರೂಜಿ (Aryavardhan Guruji) ಕೊರಳಲ್ಲೂ ಹುಲಿ ಉಗುರು (Tiger claw) ಪೆಂಡೆಂಟ್ ಧರಿಸಿದ್ದರು ಎನ್ನುವ ಕಾರಣಕ್ಕಾಗಿ ಅವರ ಕಚೇರಿ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ವಿಚಾರಣೆಗೆ ನೋಟಿಸ್ ನೀಡಿದ್ದು, ಹುಲಿ ಉಗುರನ್ನು ವಶ ಪಡಿಸಿಕೊಳ್ಳಲಾಗಿದೆ. ಬಿಗ್ ಬಾಸ್ ಮನೆಯಲ್ಲೇ ವರ್ತೂರ್ ಸಂತೋಷ್ ಬಂಧನವಾಗಿತ್ತು. ಈ ಬೆನ್ನಲ್ಲೆ ಹಲವು ದಾಳಿಗಳು ನಡೆಯುತ್ತಿವೆ.
ಆರ್ಯವರ್ಧನ್ ಕೂಡ ಬಿಗ್ ಬಾಸ್ ಸ್ಪರ್ಧಿಯಾಗಿದ್ದರು. ಆ ಸಮಯದಲ್ಲೇ ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು. ಈಗ ಅದನ್ನು ಪತ್ತೆ ಹಚ್ಚಲಾಗಿದೆ. ಆರ್ಯವರ್ಧನ್ ಕಚೇರಿಗೆ ಆಗಮಿಸಿರುವ ಅರಣ್ಯಾಧಿಕಾರಿಗಳು, ನೋಟಿಸ್ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆರ್ಯವರ್ಧನ್ ಕುತ್ತಿಗೆಯಲ್ಲಿ ವ್ಯಾಘ್ರನಖ ಹಾಕಿಕೊಂಡಿದ್ದರು ಎಂದು ಹೇಳಲಾಗುತ್ತಿದೆ,
ಅದು ಚಿನ್ನದ ಪೆಂಡೆಂಟ್ ಆಗಿರುವ ಕಾರಣದಿಂದಾಗಿ ಅರಣ್ಯಾಧಿಕಾರಿಗಳು ಅದನ್ನು ಚಿನ್ನದಂಗಡಿಗೆ ತೆಗೆದುಕೊಂಡು ಹೋಗಿದ್ದಾರೆ. ಪೆಂಡೆಂಟ್ ಜೊತೆಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರಗಿ (Prashant Sambaragi) ಕೂಡ ಹೋಗಿದ್ದಾರೆ. ಹುಲಿ ಉಗುರನ್ನು ಮಾತ್ರ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಇದು ಮೂರು ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನದ ಚೈನಾಗಿದೆ ಎನ್ನುವ ಮಾಹಿತಿ ಇದೆ.
ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಲಿ
ಕಾನೂನಿನ ಮುಂದೆ ಎಲ್ಲರೂ ಒಂದೇ. ಅವರು ಯಾವುದೇ ಪಕ್ಷದಲ್ಲಿ ಇರಲಿ, ಎಂತಹ ಗಣ್ಯ ವ್ಯಕ್ತಿಗಳೇ ಆಗಿರಲಿ. ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರೆ ಕ್ರಮ ತಗೆದುಕೊಳ್ಳಲಿ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಇಂತಹ ಪ್ರಕರಣವನ್ನು ಅರಣ್ಯ ಸಚಿವರು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಈ ಪ್ರಕರಣದಲ್ಲಿ ಬಂಧನವಾಗುತ್ತಿದ್ದಂತೆಯೇ ನಟರಾದ ಜಗ್ಗೇಶ್, ದರ್ಶನ್, ನಿಖಿಲ್ ಕುಮಾರ ಸ್ವಾಮಿ, ವಿನಯ್ ಗುರೂಜಿ ಸೇರಿದಂತೆ ಹಲವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದವು. ಅರಣ್ಯಾಧಿಕಾರಿಗಳು ಎಚ್ಚೆತ್ತುಕೊಂಡು ನೋಟಿಸ್ ನೀಡಲು ಮುಂದಾದರು. ಇದೀಗ ಬಹುತೇಕ ಎಲ್ಲರಿಗೂ ನೋಟಿಸ್ ಜಾರಿ ಮಾಡಲಾಗಿದೆ.
Web Stories