ಸಿಡ್ನಿ: ಬಹುನಿರೀಕ್ಷಿತ ಐಸಿಸಿ (ICC) ಟಿ20 ವಿಶ್ವಕಪ್ 2022 (T20 World Cup 2022) ಆರಂಭಕ್ಕೆ ಒಂದು ತಿಂಗಳು ಬಾಕಿ ಇರುವಂತೆ ಟಿ20 ವಿಶ್ವಕಪ್‍ನಲ್ಲಿ ಬಲಿಷ್ಠ ತಂಡಗಳ ಕಾದಾಟ ಕಾವೇರಿದೆ. ಈಗಾಗಲೇ ಭಾರತ (India) ಹಾಗೂ ಪಾಕಿಸ್ತಾನ (Pakistan) ನಡುವಿನ ಪಂದ್ಯದ ಟಿಕೆಟ್ (Ticket) ಸೋಲ್ಡ್ ಔಟ್ ಆಗಿದೆ.
ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ (Australia) ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿದೆ. ಈಗಾಗಲೇ ವಿಶ್ವದ ಶ್ರೇಷ್ಠ ತಂಡಗಳ ಆಟಗಾರರನ್ನು ಆಯಾ ದೇಶಗಳು ಆಯ್ಕೆ ಮಾಡಿ ಪ್ರಕಟಿಸಿದೆ. ಟಿ20 ವಿಶ್ವಕಪ್‍ನಲ್ಲಿ ವಿಶ್ವದ ಬಲಿಷ್ಠ 16 ತಂಡಗಳು ಟೂರ್ನಿಯಲ್ಲಿ ಕಾದಾಟ ನಡೆಸಲಿದೆ. ಈಗಾಗಲೇ ಆಸ್ಟ್ರೇಲಿಯಾದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಮೆಲ್ಬರ್ನ್‍ನಲ್ಲಿ (Melbourne) ಬದ್ಧವೈರಿಗಳಾದ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಅಕ್ಟೋಬರ್ 23 ರಂದು ಭಾರತ ಹಾಗೂ ಪಾಕಿಸ್ತಾನ ಪರಸ್ಪರ ಸೆಣಸಾಡಲಿದೆ. ಈ ಪಂದ್ಯ ವೀಕ್ಷಣೆಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದು ಟಿಕೆಟ್ ನೀಡಲು ಆರಂಭಿಸಿದ ಕೆಲ ನಿಮಿಷಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಇದನ್ನೂ ಓದಿ: ಐಸಿಸಿಯ ಮಾಜಿ ಎಲೈಟ್ ಪ್ಯಾನೆಲ್ ಅಂಪೈರ್ ಅಸಾದ್ ರೌಫ್ ಇನ್ನಿಲ್ಲ
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ನೀಡಿರುವ ಮಾಹಿತಿ ಪ್ರಕಾರ ಈಗಾಗಲೇ 500,000 ಟಿಕೆಟ್ ಮಾರಾಟವಾಗಿದೆ. ಪಂದ್ಯ ನಡೆಯಲು ಇನ್ನೂ ಒಂದು ತಿಂಗಳು ಕಾಲಾವಕಾಶವಿದೆ. ಮೆಲ್ಬರ್ನ್‍ನಲ್ಲಿ ನಡೆಯಲಿರುವ ಈ ಪಂದ್ಯದ ವೀಕ್ಷಣೆಗಾಗಿ 82 ದೇಶಗಳ ಕ್ರಿಕೆಟ್ ಅಭಿಮಾನಿಗಳು ಟಿಕೆಟ್ ಖರೀದಿಸಿದ್ದಾರೆ. ಇದನ್ನೂ ಓದಿ: ಗಂಗೂಲಿ, ಜಯ್ ಶಾಗೆ ಸುಪ್ರೀಂನಿಂದ ಬಿಗ್ ರಿಲೀಫ್ – ಐಸಿಸಿಯ ಬಾಸ್ ಆಗ್ತಾರಾ ದಾದಾ?
ಮೂರನೇ ಕದನಕ್ಕೆ ಸಜ್ಜು:
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಾಟಕ್ಕಾಗಿ ವಿಶ್ವ ಕ್ರಿಕೆಟ್ ಅಭಿಮಾನಿಗಳು ಕಾತರಿಂದ ಕಾಯಲು ಕಾರಣವಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಪಾಲ್ಗೊಳ್ಳುತ್ತಿದ್ದು, ಈಗಾಗಲೇ ಕೆಲದಿನಗಳ ಹಿಂದೆ ಮುಕ್ತಾಯಗೊಂಡ ಏಷ್ಯಾಕಪ್‍ನಲ್ಲಿ (Asia Cup 2022) ಪರಸ್ಪರ ಕಾದಾಡಿದ್ದವು. ಏಷ್ಯಾಕಪ್‍ನಲ್ಲಿ ಲೀಗ್ ಮತ್ತು ಸೂಪರ್ ಫೋರ್ ಹಂತದಲ್ಲಿ ಎರಡು ಬಾರಿ ಉಭಯ ತಂಡಗಳು ಎದುರುಬದುರಾಗಿದ್ದವು. ಲೀಗ್ ಪಂದ್ಯದಲ್ಲಿ ಭಾರತ ಗೆದ್ದರೆ, ಸೂಪರ್ ಫೋರ್ ಹಂತದಲ್ಲಿ ಪಾಕಿಸ್ತಾನ ಗೆದ್ದಿತ್ತು. ಇದನ್ನೂ ಓದಿ: ಪಾಕಿಸ್ತಾನದ ಭೌತಶಾಸ್ತ್ರ ಪಠ್ಯದಲ್ಲಿ ಬಾಬರ್ ಅಜಮ್ ಕವರ್ ಡ್ರೈವ್ ಪ್ರಶ್ನೆ!
ಫೈನಲ್‍ನಲ್ಲೂ ಮತ್ತೊಮ್ಮೆ ಕಾದಾಟ ನಡೆಸುವ ಸಾಧ್ಯತೆ ಇತ್ತು ಆದರೆ, ಸೂಪರ್ ಫೋರ್ ಹಂತದಲ್ಲಿ ಭಾರತ ಸತತ ಎರಡು ಸೋಲು ಅನುಭವಿಸಿ ಫೈನಲ್ ತಲುಪಲು ವಿಫಲತೆ ಕಂಡಿತು. ಪಾಕಿಸ್ತಾನ ಫೈನಲ್‍ನಲ್ಲಿ ಶ್ರೀಲಂಕಾ ವಿರುದ್ಧ ಸೋತು ರನ್ನರ್ ಅಪ್ ಆಗಿತ್ತು. ಇದೀಗ ಏಷ್ಯಾಕಪ್‍ನಲ್ಲಿ ಮೂರನೇ ಕಾದಾಟ ನೋಡಲು ವಿಫಲರಾಗಿದ್ದ ಅಭಿಮಾನಿಗಳು ಇದೀಗ ಟಿ20 ವಿಶ್ವಕಪ್‍ನಲ್ಲಿ ರೋಚಕ ಫೈಟ್ ನೋಡಲು ಕಾತರದಿಂದ ಕಾಯುತ್ತಿದ್ದಾರೆ.