ನವದೆಹಲಿ: ಕೇಸರಿ ಧ್ವಜದ ವಿಚಾರವಾಗಿ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆ ಕುರಿತಂತೆ ಕರ್ನಾಟಕ ರಾಜಕೀಯದಲ್ಲಿ ಜಿದ್ದಾಜಿದ್ದಿ ನಡೆಯುತ್ತಿದೆ. ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಈಶ್ವರಪ್ಪನವರಿಗೆ ಛೀಮಾರಿ ಹಾಕಿರುವುದಾಗಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಅವರು ಮುಂದಿನ ದಿನದಲ್ಲಿ ಕೆಂಪು ಕೋಟೆಯ ಮೇಲಿರುವ ರಾಷ್ಟ್ರಧ್ವಜವನ್ನು ಕೇಸರಿ ಧ್ವಜವನ್ನಾಗಿ ಬದಲಾಯಿಸಬಹುದು ಎಂಬ ಹೇಳಿಕೆ ನೀಡಿ ಭಾರೀ ವಿವಾದ ಸೃಷ್ಟಿಸಿದ್ದರು. ಇದನ್ನೂ ಓದಿ: ಉಗ್ರರ ಪತ್ತೆಗೆ ಗಾಜಿಯಾಬಾದ್ ಕವಿಯನ್ನು ನೇಮಿಸಿಕೊಳ್ಳಿ: ಕೇಜ್ರಿವಾಲ್ ವ್ಯಂಗ್ಯ
ಈಶ್ವರಪ್ಪ ಅವರು ಈ ಹೇಳಿಕೆ ನೀಡುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರು ಈಶ್ವರಪ್ಪ ಅವರಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ರಾಷ್ಟ್ರಧ್ವಜದ ಬಗ್ಗೆ ಅವರು ನೀಡಿರುವ ಹೇಳಿಕೆ ವಿರುದ್ಧ ದೇಶದ್ರೋಹಿ ಆರೋಪದ ಮೇಲೆ ಕೇಸು ದಾಖಲಿಸಬೇಕು ಎಂದು ಕಿಡಿಕಾರಿದ್ದಾರೆ.
ಈ ಮಧ್ಯೆ ಸಂದರ್ಶನವೊಂದರಲ್ಲಿ ಮಾತನಾಡಿದ ಜೆಪಿ ನಡ್ಡಾ ಅವರು, ಈಶ್ವರಪ್ಪ ಹೇಳಿಕೆಯನ್ನು ನಾನು ಒಪ್ಪಲ್ಲ. ನಾವು ಕಾನೂನು ರೀತಿಯಾಗಿ ನಡೆದುಕೊಳ್ಳುವವರು. ಸಂವಿಧಾನ ಒಪ್ಪುತ್ತೇವೆ. ಸಂವಿಧಾನವನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ. ನಾವು ರಾಷ್ಟ್ರವಾದಿಗಳು ತಪ್ಪು ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಅತ್ಯುತ್ಸಾಹದಲ್ಲಿ ಮಾತನಾಡಿ ಬಿಡುತ್ತಾರೆ. ಅವರು ನಮ್ಮ ಹಿರಿಯ ನಾಯಕ. ಆದರೂ ಅಂತಹ ಹೇಳಿಕೆಯನ್ನು ಕೊಡಬಾರದಿತ್ತು. ಈ ವಿಚಾರವಾಗಿ ಈಶ್ವರಪ್ಪ ಅವರಿಗೆ ಕರೆ ಮಾಡಿ ಛೀಮಾರಿ ಹಾಕಿರುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಹಿಜಬ್ ವಿವಾದಕ್ಕೆ ಉತ್ತೇಜನ ನೀಡುತ್ತಿದೆ ಮತ್ತು ಅದರಿಂದ ರಾಜಕೀಯ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ ಎಂದು ನಡ್ಡಾ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಐದು ರಾಜ್ಯಗಳಲ್ಲಿ ಬಿಜೆಪಿಗೆ ಬಹುಮತ ಸಿಗುವುದಿಲ್ಲ: ಪೃಥ್ವಿರಾಜ್ ಚವಾಣ್