-ಜೋರು ಮಳೆ, ಚಳಿಗೆ ಬೆಂಗಳೂರು ಥಂಢಾ
ಬೆಂಗಳೂರು: ನೈರುತ್ಯ ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ಫೆಂಗಲ್ ಚಂಡಮಾರುತದ (Fengal Cyclone) ಅಬ್ಬರ ರಾಜ್ಯದ ಮೇಲೂ ಪ್ರಭಾವ ಬೀರುತ್ತಿದ್ದು, ಮುಂದಿನ ಮೂರ್ನಾಲ್ಕು ದಿನ ಬೆಂಗಳೂರು (Bengaluru) ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳನ್ನು ಕಾಡುವ ಸಾಧ್ಯತೆ ಇದೆ.
ಫೆಂಗಲ್ ಚಂಡಮಾರುತ ಶನಿವಾರ ಸಂಜೆ ವೇಳೆ ತಮಿಳುನಾಡು ಕರಾವಳಿಗೆ ಅಪ್ಪಳಿಸಿದ್ದು, ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ನಗರಗಳು ಹಾಗೂ ಆಂಧ್ರಪ್ರದೇಶದ ಕರಾವಳಿ ಮತ್ತು ರಾಯಲಸೀಮಾ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಈ ಭಾಗದ ರಸ್ತೆಗಳಲ್ಲಿ ನೀರು ನಿಂತಿದೆ. ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿ ಜನ ಪರದಾಡಿದ್ದಾರೆ. ವಸತಿ ಪ್ರದೇಶಗಳು, ಆಸ್ಪತ್ರೆಗಳಿಗೂ ನೀರು ನುಗ್ಗಿ ತೊಂದರೆಯಾಗಿದೆ. ಈ ಮಧ್ಯೆ ಫೆಂಗಲ್ ಅಬ್ಬರ ರಾಜ್ಯದ ಕೆಲ ಜಿಲ್ಲೆಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದ್ದು, ಶನಿವಾರದಿಂದಲೇ ಬದಲಾದ ವಾತಾವರಣ ರಾಜ್ಯದ ಜಿಲ್ಲೆಗಳ ಜನರನ್ನು ಕಾಡತೊಡಗಿದೆ. ಇದನ್ನೂ ಓದಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವಕ್ಕೆ ಅದ್ದೂರಿ ತೆರೆ – ಲಕ್ಷಾಂತರ ಭಕ್ತರು ಸಾಕ್ಷಿ
ಚಂಡಮಾರುತದ ಎಫೆಕ್ಟ್ ಮುಂದಿನ ಮೂರ್ನಾಲ್ಕು ದಿನ ರಾಜ್ಯ ರಾಜಧಾನಿ ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಕೆಲವೆಡೆ ಭಾನುವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದ್ದು, ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಾಮರಾಜನಗರ, ತುಮಕೂರು ಮತ್ತು ಕೊಡಗು ಜಿಲ್ಲೆಯ ಕೆಲ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ. ಮೈಸೂರು ಹಾಗೂ ಕೊಡಗು ಜಿಲ್ಲೆಗೆ ಸೋಮವಾರ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಮಂಡ್ಯ, ರಾಮನಗರ ಹಾಗೂ ಚಾಮರಾಜನಗರ ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ಮಂಗಳವಾರವೂ ಈ ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತ ಭಾರೀ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಜೆಡಿಎಸ್ ತೊರೆದು ಬಿಜೆಪಿ ಸೇರಿದ ಮಾಜಿ ಎಂಎಲ್‌ಸಿ ಘೋಟ್ನೇಕರ್
ಇನ್ನೂ ಚಂಡಮಾರುತದ ಎಫೆಕ್ಟ್ ಸದ್ಯ ಬೆಂಗಳೂರಿಗೂ ತಟ್ಟುವ ಸಾಧ್ಯತೆ ಇದೆ. ಒಂದು ಕಡೆ ಮಳೆ ಆಗುವಂತಹ ವಾತವರಣ ಇದ್ದರೆ, ಮತ್ತೊಂದೆಡೆ ಚಳಿ ವಾತವರಣ ಹೆಚ್ಚಾಗುವ ಸಾಧ್ಯತೆ ಇದೆ. ಮುಂದಿನ ಮೂರು ದಿನ ನಗರದಲ್ಲಿ ಕೂಲ್ ಕೂಲ್ ವೆದರ್ ಮುಂದುವರೆಯುವ ಬಗ್ಗೆ ಹವಾಮಾನ ಇಲಾಖೆ ಕೂಡ ಮುನ್ಸೂಚನೆ ನೀಡಿದೆ. ಇದರ ಮಧ್ಯೆ ಮಳೆ ಸೂಚನೆ ಹಿನ್ನೆಲೆ ಬಿಬಿಎಂಪಿ ಕೂಡ ಅಲರ್ಟ್ ಆಗಿದ್ದು, ಮುಂಜಾಗ್ರತ ಕ್ರಮಗಳ ಕೈಗೊಳ್ಳಲು ಬಿಬಿಎಂಪಿ ಕಮಿಷನರ್ ಸೂಚಿಸಿದ್ದಾರೆ. ಜೊತೆಗೆ ಮುಂದಿನ ಮೂರ್ನಾಲ್ಕು ದಿನ ಅಧಿಕಾರಿಗಳ ರಜೆ ಕೂಡ ಕ್ಯಾನ್ಸಲ್ ಮಾಡಲಾಗಿದ್ದು, ನಿಯಮ ಉಲ್ಲಂಘನೆಯಾದರೆ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನಮ್ಮ ಮಠ-ಮಾನ್ಯಗಳ ಜೀರ್ಣೋದ್ಧಾರಕ್ಕೆ ಆ ಮುಲ್ಲಾಗಳಿಂದ ಹಣ ತೆಗೆದುಕೊಳ್ಳಬೇಡಿ: ಯತ್ನಾಳ್