ಕೋಲಾರ: ಜಿಲ್ಲೆಗೆ 28 ವರ್ಷಗಳಿಂದ ತಟ್ಟಿರುವ ಶಾಪ ಮೇ 23 ರಂದು ಮುಕ್ತಿಯಾಗಲಿದೆ ಎಂದು ಬಿಜೆಪಿಯ ಲೋಕಸಭಾ ಅಭ್ಯರ್ಥಿ ಎಸ್.ಮುನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮೇ 23ರ ಮತ ಏಣಿಕೆಯ ಕುರಿತಂತೆ ಏಜೆಂಟ್‍ಗಳಿಗೆ ಆಯೋಜಿಸಿದ್ದ ಕಾರ್ಯಾಗಾರದ ನಂತರ ಸುದ್ದಿಗಾರ ಜೊತೆ ಮಾತನಾಡಿದ ಅವರು, ಜಿಲ್ಲೆಗೆ 28 ವರ್ಷಗಳಿಂದ ಕೆ.ಎಚ್.ಮುನಿಯಪ್ಪ ಅವರಿಂದ ತಟ್ಟಿರುವ ಶಾಪ ಇನ್ನೆರೆಡು ದಿನಗಳಲ್ಲಿ ವಿಮೋಚನೆಯಾಗಲಿದೆ ಎಂದು ಭವಿಷ್ಯ ನುಡಿದರು.
Advertisement
ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಅನುಮಾನವಿಲ್ಲ, ಅದೇ ರೀತಿ ಕೋಲಾರ ಲೋಕಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಖಚಿತ. ಚುನಾವಣೆ ಮುಗಿದ ಮೇಲೂ ಸಹ ಜಿಲ್ಲೆಯ ಜನರ ಜೊತೆ ಇದ್ದೇನೆ. ಮುಂದೆಯೂ ಸಹ ಜಿಲ್ಲೆಯಲ್ಲೇ ಇರುತ್ತೇನೆ. ಕೋಲಾರ ಲೋಕಸಭಾ ವ್ಯಾಪ್ತಿಯಲ್ಲಿ ಎಲ್ಲಾ ಪಕ್ಷದ ಮುಖಂಡರು ಪಕ್ಷಾತೀತವಾಗಿ ಮತ ಹಾಕಿಸಿರುವುದರಿಂದ ಲಕ್ಷ ಮತಗಳ ಅಂತರದಿಂದ ಗೆಲುತ್ತೇವೆ ಎಂದರು.
Advertisement
Advertisement
ಬಂಗಾರಪೇಟೆ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಚಂದ್ರರೆಡ್ಡಿ ಅವರು ಯಾವುದೇ ರೀತಿಯ ತುಘಲಕ್ ದರ್ಬಾರ್ ಮಾಡದೇ ಪ್ರಜಾ ಪ್ರಭುತ್ವದಲ್ಲಿ ಮುಕ್ತವಾಗಿ ಚುನಾವಣೆ ಮಾಡಬೇಕು. ಅದು ಬಿಟ್ಟು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ಹಣದ ಆಮಿಷ ಬೆದರಿಕೆ ಹಾಕಿರುವುದು ಗೌರವ ತರುವಂತಹ ವಿಷಯವಲ್ಲವೆಂದು ವಾಗ್ದಾಳಿ ನಡೆಸಿದರು. ಇದೇ ವೇಳೆ ಮಾಜಿ ಶಾಸಕ ಕೃಷ್ಣಯ್ಯಶೆಟ್ಟಿ ಅವರು ತಮ್ಮ ಅಧಿಕಾರವಧಿಯಲ್ಲಿ ಯಾವ ರೀತಿ ಕೆಲಸ ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.