ಕಮಲ್ ಹಾಸನ್ (Kamal Haasan) ಅಭಿನಯದ ʻಥಗ್ ಲೈಫ್ʼಚಿತ್ರದ (Thug Life) ಟ್ರೈಲರ್ ರಿಲೀಸ್ ಆಗಿದ್ದು, ತ್ರಿಷಾ ಜೊತೆ ರೊಮ್ಯಾನ್ಸ್.. ಅಭಿರಾಮಿಗೆ ಲಿಪ್‌ಲಾಕ್ ಮಾಡುವ ಸೀನ್ ಅಭಿಮಾನಿಗಳ ಕಾತುರ ಹೆಚ್ಚಿಸಿದೆ. ಸಿನಿ ರಸಿಕರ ಈ ಕಾತುರ ತಣಿಯಲು ಜೂ.5ರ ವರೆಗೆ ಕಾಯಲೇ ಬೇಕಿದೆ!
ರಿಲೀಸ್ ಆಗಿರುವ ಟ್ರೈಲರ್‌ನಲ್ಲಿ ಕಮಲ್ ಹಾಸನ್ ನಟಿ ತ್ರಿಷಾ (Trisha) ಜೊತೆ ಪ್ರೇಮಿಯಂತೆ ಕಾಣಿಸಿಕೊಂಡಿದ್ದಾರೆ. ಇನ್ನೂ ನಟಿ ಅಭಿರಾಮಿ (Abhirami) ಜೊತೆ ಲಿಪ್‌ಲಾಕ್ ಮಾಡುವ ದೃಶ್ಯ ಪ್ರೇಕ್ಷಕರನ್ನು ಗೊಂದಲಕ್ಕೀಡು ಮಾಡಿದೆ. ಚಿತ್ರದಲ್ಲಿ ಸಿಂಬು ಜೊತೆ ತ್ರಿಷಾ ಜೋಡಿಯಾಗುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಕಮಲ್ ಜೊತೆ ತ್ರಿಷಾ ಅವರನ್ನು ನೋಡಿದ ನಂತರ ʻಏನಪ್ಪ ಈ ಥಗ್ ಲೈಫ್ʼ ಅಂತ ಜನ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ನಾನಾ ರೀತಿಯ ಚರ್ಚೆಗಳು ಈಗಾಗಲೆ ಆರಂಭವಾಗಿದೆ.
ಚೆನ್ನೈ, ಕಾಂಚಿಪುರಂ, ಪಾಂಡಿಚೇರಿ, ನವದೆಹಲಿಯಲ್ಲಿ ‘ಥಗ್ ಲೈಫ್’ ಚಿತ್ರದ ಚಿತ್ರೀಕರಣ ನಡೆದಿದೆ. ಈಗಾಗಲೇ ಚಿತ್ರದ 4 ಹಾಡುಗಳು ಬಿಡುಗಡೆಯಾಗಿ ಸದ್ದು ಮಾಡುತ್ತಿವೆ. ನೆಟ್‌ಫ್ಲಿಕ್ಸ್ ಸಂಸ್ಥೆ 149 ಕೋಟಿ ರೂ.ಗೆ ಚಿತ್ರದ ಓಟಿಟಿ ರೈಟ್ಸ್ ಖರೀದಿಸಿದೆ ಎಂದು ವರದಿಯಾಗಿದೆ.
ರಾಜ್ ಕಮಲ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಕಮಲ್ ಹಾಸನ್, ಸಿಂಬು, ತ್ರಿಷಾ, ಅಭಿರಾಮಿ, ಜೋಜು ಜಾರ್ಜ್, ಅಶೋಕ್ ಸೆಲ್ವನ್, ಐಶ್ವರ್ಯ ಲಕ್ಷ್ಮಿ, ನಾಸರ್ ಸೇರಿದಂತೆ ಹಲವು ಪ್ರಮುಖ ತಾರೆಯರು ನಟಿಸಿದ್ದಾರೆ. ಚಿತ್ರಕ್ಕೆ ಮಣಿರತ್ನಂ ಹಾಗೂ ಕಮಲ್ ಇಬ್ಬರೂ ಕತೆ ಬರೆದಿದ್ದಾರೆ. ರೆಹಮಾನ್ ಸಂಗೀತ ಚಿತ್ರಕ್ಕೆ ದೊಡ್ಡ ಶಕ್ತಿಯಾಗುವ ನಿರೀಕ್ಷೆ ಇದೆ.
ಕಳೆದ ವಾರವೇ ಚಿತ್ರದ ಟ್ರೈಲರ್ ಬಿಡುಗಡೆಗೆ ಸಿದ್ಧತೆ ನಡೆದಿತ್ತು. ಆದರೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ-ಪಾಕ್ ಗಡಿಯಲ್ಲಿ ಘರ್ಷಣೆಯಿಂದಾಗಿ ಕಮಲ್ ಹಾಸನ್ ಮುಂದೂಡಿದ್ದರು.