ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಮರಗೂರ ಬಳಿ ಭೀಮಾ ನದಿಗೆ ಸ್ನಾನಕ್ಕೆಂದು ತೆರಳಿದ್ದ ಮೂವರು ಯುವಕರು ನೀರುಪಾಲಾದ ಘಟನೆ ನಡೆದಿದೆ.
ಮೃತರನ್ನು ಅಂಜುಟಗಿ ಗ್ರಾಮದ ಓರ್ವ ಹಾಗೂ ಮಹಾರಾಷ್ಟ್ರದ ಔದ್ ಗ್ರಾಮದ ಇಬ್ಬರು ಯುವಕರು ಎಂದು ಗುರುತಿಸಲಾಗಿದೆ. ಯುಗಾದಿ ಪ್ರಯುಕ್ತ ದೇವರ ಕಾರ್ಯ ಮಾಡಲು ಮರಗೂರ ಗ್ರಾಮದಲ್ಲಿನ ಖಾಜಾಸಾಬ ದರ್ಗಾಕ್ಕೆ ಯುವಕರು ತೆರಳಿದ್ದರು.
ನಾಲ್ಕು ದಿನದ ಹಿಂದಷ್ಟೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಬಿಡಲಾಗಿತ್ತು. ನದಿಯಲ್ಲಿ ಮರಳು ತೆಗೆದಿದ್ದ ಭಾಗದಲ್ಲಿ ಸ್ನಾನಕ್ಕೆ ಹೋದಾಗ ಗೊತ್ತಾಗದೆ ಇದ್ದಕ್ಕಿದ್ದಂತೆ ಆಳಕ್ಕೆ ಬಿದ್ದು ಈ ದುರ್ಘಟನೆ ಸಂಭವಿಸಿದೆ.
ಮೂವರು ಯುವಕರು ಮುಳುಗುತ್ತಿರುವುದನ್ನು ಸ್ಥಳೀಯರು ನೋಡಿದ್ದು, ಇದೀಗ ಶವಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.