– ಮಹಿಳೆಯರ ಸಾವಿಗೆ ಶಸ್ತ್ರಚಿಕಿತ್ಸಾ ಕೊಠಡಿ ಅಶುಚಿತ್ವವೇ ಕಾರಣ
– ಸ್ಟೆಫೆಲೋ ಕಾಕಲ್ ಬ್ಯಾಕ್ಟೀರಿಯಾದಿಂದ ಸಾವನ್ನಪ್ಪಿರಬಹುದು ಎಂದ ಡಿಹೆಚ್‌ಒ
ತುಮಕೂರು: ಒಂದೇ ದಿನ ವಿವಿಧ ಶಸ್ತ್ರಚಿಕಿತ್ಸೆಗೆ (Surgery) ಒಳಗಾಗಿದ್ದ ಮೂವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ (Pavagada Government Hospital) ನಡೆದಿದೆ.
ಸಂತಾನಹರಣ, ಗರ್ಭಕೋಶ ಆಪರೇಷನ್ ಹಾಗೂ ಸಿಸೇರಿಯನ್ (Cesarean) ಹೆರಿಗೆಗೆ ಒಳಗಾಗಿದ್ದ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಕಳೆದ 5 ದಿನಗಳ ಅವಧಿಯಲ್ಲಿ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ದುಬೈನಲ್ಲಿ ಗೌಡರ ಗೌಜಿ ಗಮ್ಮತ್ತು-2024 – ಒಕ್ಕಲಿಗ ಸಮುದಾಯಗಳ ಕುಟುಂಬ ಸಮಾಗಮ
ಇದೇ ಫೆಬ್ರವರಿ 22ರಂದು 7 ಮಹಿಳೆಯರಿಗೆ ಹೆರಿಗೆ ಸೇರಿದಂತೆ ವಿವಿಧ ರೀತಿಯ ಶಸ್ತ್ರಚಿಕಿತ್ಸೆಗೆ ಮಾಡಲಾಗಿತ್ತು. ಈ ವೇಳೆ ಸಂತಾನ ಹರಣ ಚಿಕಿತ್ಸೆಗೆ ಒಳಗಾಗಿದ್ದ ವೀರ್ಲಗೊಂದಿ ಗ್ರಾಮದ ಮಹಿಳೆ ಅನಿತಾ (30) ಚಿಕಿತ್ಸೆ ಮಾಡಿಸಿಕೊಂಡ ದಿನವೇ ಸಾವನ್ನಪ್ಪಿದ್ದಾರೆ. ಇನ್ನೂ ರಾಜವಂತಿ ಮೂಲದ ಅಂಜಲಿ ಎಂಬ ಮಹಿಳೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಹೆರಿಗೆ ಬಳಿಕ ಮಹಿಳೆಯ ಸ್ಥಿತಿ ಗಂಭೀರವಾಗಿತ್ತು. ಆದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಫೆ.24ರಂದು ಅಂಜಲಿ ಸಾವನ್ನಪ್ಪಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಬ್ಯಾಡನೂರು ಗ್ರಾಮದ 40 ವರ್ಷದ ನರಸಮ್ಮ ಎಂಬ ಮಹಿಳೆ ಗರ್ಭಕೋಶದ ಶಸ್ತ್ರಚಿಕಿತ್ಸೆಗೆ ನಡೆಸಲಾಗಿತ್ತು. ನಸರಮ್ಮ ಸ್ಥಿತಿಯೂ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಫೆ.25 ರಂದು ನಸರಮ್ಮ ಸಾವನ್ನಪ್ಪಿದ್ದರು. ಈ ಮೂವರು ಫೆ.22ರಂದು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಲಾಗಿದೆ.
ಇದೀಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಶಸ್ತ್ರಚಿಕಿತ್ಸೆಗೆ ನಡೆಸಿದ ವೈದ್ಯೆ ಡಾ. ಪೂಜಾ ಹಾಗೂ ನಿರ್ಲಕ್ಷ್ಯ ತೋರಿದ ಆಸ್ಪತ್ರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮೃತರ ಭಾವಚಿತ್ರ ಹಿಡಿದು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ರಾಹುಲ್‌ಗೆ ಶಾಕ್ – ವಯನಾಡಿನಲ್ಲಿ ಸಿಪಿಐ ಅಭ್ಯರ್ಥಿ ಕಣಕ್ಕೆ
ಆರೋಗ್ಯಾಧಿಕಾರಿ ಹೇಳಿದ್ದೇನು?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ್ `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ್ದಾರೆ. ಫೆ.22 ರಂದು ಮಹಿಳೆಯರಿಗೆ ಶಸ್ತ್ರಚಿಕಿತ್ಸೆ ನಡೆದಿದೆ. ಒಟ್ಟು 7 ಮಹಿಳೆಯರಿಗೆ ಅಂದು ಸಂತಾನಹರಣ, ಸಿಸೇರಿಯನ್ ಮತ್ತು ಗರ್ಭಕೋಶದ ಶಸ್ತ್ರಚಿಕಿತ್ಸೆ ನಡೆದಿದೆ. ಈ ಘಟನೆಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಹೇಳೋಕಾಗಲ್ಲ. ಶಸ್ತ್ರಚಿಕಿತ್ಸಾ ಕೊಠಡಿ (ಆಪರೇಷನ್ ಥಿಯೇಟರ್ ಶುಚಿತ್ವ) ಇಲ್ಲದಿರೋದು ಕಾರಣ ಇರಬಹುದು. ಆಪರೇಷನ್ ಥಿಯೇಟರ್‌ನಲ್ಲಿ ಸ್ಟೆಫೆಲೋ ಕಾಕಲ್ ಬ್ಯಾಕ್ಟೀರಿಯಾ ಇದೆ. ಇದರಿಂದ ಮಹಿಳೆಯರು ಸಾವನ್ನಪ್ಪಿರಬಹುದು. ಬೆಂಗಳೂರಿನಿಂದ ತನಿಖಾ ತಂಡ ಬಂದು ಸ್ಯಾಂಪಲ್ ತೆಗೆದುಕೊಂಡು ಹೋಗಿದೆ. ವರದಿ ಬಂದ ನಂತರ ವೈದ್ಯರು ಸೇರಿದಂತೆ ಸಿಬ್ಬಂದಿ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.