ನವದೆಹಲಿ: ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ (NDA) ಸರ್ಕಾರ ರಚನೆ ಆಗುವುದಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇಂದು (ಭಾನುವಾರ) ಸಂಜೆ 7:15ಕ್ಕೆ ಸರಿಯಾಗಿ ರಾಷ್ಟ್ರಪತಿ ಭವನದಲ್ಲಿ ಮೋದಿ (Narendra Modi) ದೇಶದ ಪ್ರಧಾನಿಯಾಗಿ ಸತತ ಮೂರನೇ ಬಾರಿ ಪದಗ್ರಹಣ ಮಾಡಲಿದ್ದಾರೆ.
ಪ್ರಮಾಣವಚನ ಸಮಾರಂಭಕ್ಕೆ ರಾಜ್ಯ, ದೇಶ ಹಾಗೂ ವಿದೇಶಿ ಗಣ್ಯರೂ ಸೇರಿದಂತೆ ಸುಮಾರು 9 ಸಾವಿರ ಗಣ್ಯಮಾನ್ಯರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನಕ್ಕೆ (Rashtrapati Bhavan) 3 ಹಂತಗಳಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ.
ದೆಹಲಿ ಈಗ ಭದ್ರಕೋಟೆ – 3 ಹಂತದಲ್ಲಿ ಭದ್ರತೆ:
ಪ್ರಮಾಣವಚನ ಸ್ವೀಕಾರ ಸಮಾರಂಭ ಹಿನ್ನೆಲೆ ವಿಶ್ವನಾಯಕರೂ ಸಮಾರಂಭಕ್ಕೆ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನಕ್ಕೆ ಮೂರು ಹಂತಗಳಲ್ಲಿ ಭದ್ರತೆ ನಿಯೋಜನೆ ಮಾಡಲಾಗಿದೆ. ವಿದೇಶಿ ಗಣ್ಯರು ತಂಗುವ ತಾಜ್, ಮೌರ್ಯ, ಲೀಲಾ ಮತ್ತು ಒಬೆರಾಯ್ ಸೇರಿದಂತೆ ಪ್ರಮುಖ ಹೋಟೆಲ್‌ಗಳ ಸುತ್ತ ಪೊಲೀಸ್ ಸರ್ಪಗಾವಲು ಇರಲಿದೆ. ಇದರೊಂದಿಗೆ ದೆಹಲಿ ಉನ್ನತ ಪೊಲೀಸ್ ಪಡೆ, ರಾಷ್ಟ್ರೀಯ ಭದ್ರತಾ ಪಡೆ (NSG) ನಿಯೋಜಿಸಲಾಗಿದೆ. ಗಣ್ಯರು ಸಂಚರಿಸುವ ರಸ್ತೆಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ರಾಜಧಾನಿ ವಲಯದ ಮೇಲೆ ವಿಮಾನ, ಡ್ರೋನ್, ಹಾಟ್ ಬಲೂನ್‌ಗಳ ಹಾರಾಟವನ್ನು ನಿಷೇಧಿಸಲಾಗಿದೆ. ಗುಪ್ತಚರ ಘಟಕಗಳನ್ನು ಸಜ್ಜುಗೊಳಿಸಲಾಗಿದ್ದು, ಟ್ರಾಫಿಕ್ ಚೆಕ್‌ಪೋಸ್ಟ್‌ಗಳಲ್ಲಿಯೂ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಜೊತೆಗೆ ರಾಷ್ಟ್ರ ರಾಜಧಾನಿ ಪ್ರವೇಶಿಸುವ ಗಡಿಗಳನ್ನು ಬಂದ್ ಮಾಡಲಾಗಿದೆ. ಜೂನ್ 10ರ ವರೆಗೂ ಈ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಯಮ ಉಲ್ಲಂಘಿಸಿದರೇ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188ರ ಅಡಿಯಲ್ಲಿ ಭಾರೀ ಪ್ರಮಾಣದ ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.