ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿ.ಎಸ್.ಯಡಿಯೂರಪ್ಪ ಸರ್ಕಾರದ ಚಲವಲನದ ಮೇಲೆ ನಿಗಾ ಇರಿಸಲು ಮೂರು ತಂಡಗಳನ್ನು ರಚಿಸಿದ್ದಾರೆ. ಈ ಮೂರು ತಂಡ ಸರ್ಕಾರ ಮತ್ತು ಸಂಪುಟ ಸಚಿವರ ಕಾರ್ಯವೈಖರಿಯನ್ನು ಗಮನಿಸಿ ಕೇಂದ್ರಕ್ಕೆ ಮಾಹಿತಿ ರವಾನಿಸಲಿದೆ ಎಂದು ತಿಳಿದು ಬಂದಿದೆ.
ಯಡಿಯೂರಪ್ಪ ಸರ್ಕಾರ ರಚನೆ ಮಾಡಿ ಸಿಎಂ ಆದರೂ ಪ್ರತಿಯೊಂದು ನಿರ್ಣಯ ತೆಗೆದುಕೊಳ್ಳಲು ಹೈಕಮಾಂಡ್ ಒಪ್ಪಿಗೆ ಪಡೆಯಲೇಬೇಕಿದೆ. ಸಂಪುಟ ರಚನೆ, ಖಾತೆ ಹಂಚಿಕೆ ಬಳಿಕ ಸಣ್ಣದೊಂದು ಅಸಮಾಧಾನದ ಹೊಗೆ ಬಿಜೆಪಿ ಪಡಸಾಲೆಯಲ್ಲಿ ಕಾಣಿಸಿಕೊಂಡಿದೆ. ಆದರೆ ಬಹುತೇಕ ರಾಜ್ಯ ನಾಯಕರು ನೇರವಾಗಿ ಅಲ್ಲದೇ ಪರೋಕ್ಷವಾಗಿ ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ. ಯಡಿಯೂರಪ್ಪ ಸರ್ಕಾರದ ಪ್ರತಿಯೊಂದು ಮಾಹಿತಿ, ನಾಯಕರ ಚಲನವಲನ ಸೇರಿದಂತೆ ಎಲ್ಲ ವಿಷಯವನ್ನು ಈ ಮೂರು ತಂಡಗಳು ಕಲೆ ಹಾಕಲಿವೆ. ಅಮಿತ್ ಶಾ, ಪ್ರಧಾನಿ ಮೋದಿ ಒಪ್ಪಿಗೆ ಪಡೆದು ಮೂರು ತಂಡಗಳನ್ನು ರಚಿಸಿದ್ದಾರೆ ಎನ್ನಲಾಗಿದೆ.
ಮೂರು ತಂಡದ ಕಾರ್ಯವೈಖರಿ:
1. ಯಡಿಯೂರಪ್ಪ ಅವರ ಜೊತೆ ಪುತ್ರ ವಿಜಯೇಂದ್ರ ಮೇಲೆ ಒಂದು ಜೇಮ್ಸ್ ಬಾಂಡ್ ಟೀಂ ಕೆಲಸ ಮಾಡಲಿದೆ.
2. ಮೂವರು ಡಿಸಿಎಂ, ಪ್ರಭಾವಿ ಖಾತೆ ಹೊಂದಿರುವ ಹಿರಿಯ ಸಚಿವರ ಮೇಲೆ ಮತ್ತೊಂದು ತಂಡ
3. ಉಳಿದ ಸಚಿವರ ಚಲನವಲನ ಮೇಲೆ ಮೂರನೇ ತಂಡ ಗಮನಿಸಲಿದೆ.
ಸರ್ಕಾರ ಕೈಗೊಳ್ಳಯವ ನಿರ್ಧಾರಗಳು, ವರ್ಗಾವಣೆ, ಪ್ರಮುಖ ಯೋಜನೆಗಳು, ಸರಿ ತಪ್ಪುಗಳನ್ನು ಈ ಜೇಮ್ಸ್ ಬಾಂಡ್ ಟೀಂ ಲೆಕ್ಕ ಹಾಕುತ್ತಿದೆ. ಸ್ವಲ್ಪ ಹೆಚ್ಚು ಕಡಿಮೆ ನಿರ್ಧಾರ, ಬೇರೆ ಬೇರೆಯದ್ದಕ್ಕೆ ಕೈ ಹಾಕಿದ್ರೆ ಎಲ್ಲ ವಿಚಾರಗಳು ನೇರವಾಗಿ ಅಮಿತ್ ಶಾ ಗಮನಕ್ಕೆ ಹೋಗುತ್ತವೆ ಎಂದು ಮೂಲಗಳು ತಿಳಿಸಿವೆ.