ಗದಗ: ಹಣ ದುರುಪಯೋಗ ಹಾಗೂ ಕರ್ತವ್ಯಲೋಪ ಎಸಗಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲೆಯ ಮೂವರು ಮುಖ್ಯ ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಗದಗ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಚ್.ನಾಗೂರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಶಿರಹಟ್ಟಿ, ಲಕ್ಷ್ಮೇಶ್ವರ ಹಾಗೂ ಮುಂಡರಗಿ ತಾಲೂಕಿನ ಒಬ್ಬೊಬ್ಬ ಮುಖ್ಯಶಿಕ್ಷಕರು ಅಮಾನತುಗೊಂಡಿದ್ದಾರೆ. ಮಕ್ಕಳ ಶೂ ಹಾಗೂ ಸಾಕ್ಸ್ ಖರೀದಿಯಲ್ಲಿ ಇಲಾಖೆ ನಿಯಮಗಳನ್ನು ಮೀರಿ ಕಳಪೆ ಗುಣಮಟ್ಟದ ಶೂ ಹಾಗೂ ಸಾಕ್ಸ್ ಖರೀದಿ ಮಾಡಿರುವ ಆರೋಪದ ಮೇರೆಗೆ ಸರ್ಕಾರಿ ಪ್ರಾಥಮಿಕ ಶಾಲೆ ಮ್ಯಾಗೇರಿ-ಶಿರಹಟ್ಟಿ ಮುಖ್ಯಶಿಕ್ಷಕ ಎಸ್.ಬಿ ಸರ್ಜಾಪೂರ ಅವರನ್ನು ಅಮಾನತುಗೊಳಿಸಲಾಗಿದೆ.
Advertisement
ಅಕ್ಷರ ದಾಸೋಹ ಯೋಜನೆಯ 6.44 ಲಕ್ಷ ರೂ. ಹಣ ದುರುಪಯೋಗ ಮಾಡಿದ್ದಾರೆ ಎಂಬ ದೂರಿನ ಮೇರೆಗೆ ಲಕ್ಷ್ಮೇಶ್ವರ ಸರಕಾರಿ ಪ್ರಾಥಮಿಕ ನಂಬರ್-4 ಶಾಲೆಯ ಮುಖ್ಯಶಿಕ್ಷಕ ಎ.ಎಸ್ ಬಣಗಾರ ಅವರನ್ನು ಮಾನತುಗೊಳಿಸಲಾಗಿದೆ. ಮದ್ಯಪಾನ ಮಾಡಿ ಶಾಲೆಗೆ ಬರುವುದು ಹಾಗೂ ಶಾಲೆಗೆ ತಡವಾಗಿ ಬರುತ್ತಿದ್ದರಿಂದ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಎಸ್.ಕೆ.ಗಾಡರೆಡ್ಡಿಯವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
Advertisement
ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಹಾಗೂ ಶಾಲಾ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸದೇ ಇರುವ ಶಿಕ್ಷಕರು ಎಂದು ಶಿಕ್ಷಣ ಇಲಾಖೆಗೆ ದೂರು ಬಂದಿವೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಎಲ್ಲ ಶಾಲೆಗಳು ಶ್ರಮಿಸಬೇಕು. ಮಕ್ಕಳ ಕಲಿಕೆಯಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.