ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಕಾವಳಗಾನಹಳ್ಳಿ ಗ್ರಾಮದ ಜೈನ್ ಪಬ್ಲಿಕ್ ಶಾಲೆಯ ಒಂಬತ್ತನೇ ತರಗತಿಯ ಮೂವರು ವಿಧ್ಯಾರ್ಥಿಗಳು ನಾಪತ್ತೆಯಾಗುವುದರ ಮೂಲಕ ಪೋಷಕರು ಆತಂಕದಲ್ಲಿದ್ದಾರೆ.
ರವಿತೇಜ ಸ್ಕಂದ, ಪವನ್ ತೇಜ, ಶ್ರೀಕಾಂತ್ ನಾಪತ್ತೆಯಾದ ವಿದ್ಯಾರ್ಥಿಗಳು. ಇದೇ ತಿಂಗಳ 2ನೇ ತಾರೀಕು ಶನಿವಾರ ಬೆಳಗ್ಗೆ ಶಾಲೆಯಲ್ಲಿ ಪ್ರಾಜೆಕ್ಟ್ ವರ್ಕ್ ಕೊಟ್ಟಿದ್ದಾರೆ, ಪ್ರಿಂಟ್ ಔಟ್ ತೆಗೆದುಕೊಂಡು ಬರುತ್ತೇವೆ ಅಂತ ಹೇಳಿ ಹೋದವರು ಮತ್ತೆ ಮನೆಗೆ ವಾಪಸ್ ಬಂದಿಲ್ಲ. ಅಂದು ರಾತ್ರಿವರೆಗೂ ಕಾದ ಪೋಷಕರು, ತಮ್ಮ ಮಕ್ಕಳು ಕಾಣೆಯಾದ ಬಗ್ಗೆ ಚಿಂತಾಮಣಿ ನಗರ ಠಾಣೆಯಲ್ಲಿ ದೂರು ದಾಖಲಿಸಿ ಮಕ್ಕಳಿಗಾಗಿ ಊರೂರು ಅಲೆಯುತ್ತಿದ್ದಾರೆ.
5 ದಿನಗಳಿಂದಲೂ ತಮ್ಮ ಮಕ್ಕಳು ಪತ್ತೆಯಾಗದ ಹಿನ್ನೆಲೆ, ಮಕ್ಕಳ ಭಾವಚಿತ್ರಗಳನ್ನು ಕೈಯಲ್ಲಿ ಹಿಡಿದು ಗಲ್ಲಿ ಗಲ್ಲಿಗಳಲ್ಲಿ, ಬಸ್ ನಿಲ್ದಾಣ, ರೈಲ್ವೇನಿಲ್ದಾಣ, ಸೇರಿದಂತೆ ಹೋಟೆಲ್ ಗಳ ಬಳಿ ಹುಡುಕಾಡುತ್ತಿದ್ದಾರೆ.
ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಸೇರಿದಂತೆ ಯಲಹಂಕ, ಬೆಂಗಳೂರಿನಲ್ಲಿ ಹುಡುಕಾಟ ನೆಡೆಸಿದ್ದಾರೆ. ಇನ್ನು ಖಚಿತ ಮಾಹಿತಿ ಮೇರೆಗೆ ಚಿಂತಾಮಣಿ ನಗರ ಠಾಣೆ ಪೊಲೀಸರು, ಕೆ.ಆರ್.ಪುರಂ ಸುತ್ತಮುತ್ತ, ಮಕ್ಕಳಿಗಾಗಿ ಶೋಧ ನಡೆಸಿದ್ದಾರೆ.
ಸದ್ಯ ಮುದ್ದಿನ ಮಕ್ಕಳನ್ನು ನೆನೆಸಿಕೊಂಡ ಅಪ್ಪಂದಿರು ತಮ್ಮ ಮಕ್ಕಳಿಗಾಗಿ ಕಣ್ಣೀರಿಡುತ್ತಿದ್ದಾರೆ.