ಗಾಂಧಿನಗರ: ಅಪಘಾತ ತಪ್ಪಿಸಿ ಪ್ರಶಂಸೆ ಪಡೆಯುವ ಉದ್ದೇಶಕ್ಕಾಗಿ ರೈಲು ಹಳಿತಪ್ಪಿಸುವ ಸಂಚು ರೂಪಿಸಿದ್ದಕ್ಕಾಗಿ ಮೂವರು ರೈಲ್ವೇ ಸಿಬ್ಬಂದಿಯನ್ನು ಬಂಧಿಸಿರುವ ಘಟನೆ ಸೂರತ್ (Surat) ಜಿಲ್ಲೆಯ ಕಿಮ್ ಬಳಿ ನಡೆದಿದೆ.
ಅಪಘಾತ ತಪ್ಪಿಸಿ ಪ್ರಶಂಸೆ ಪಡೆಯುವ ಉದ್ದೇಶದಿಂದ ಫಿಶ್ ಪ್ಲೇಟ್‌ಗಳು (Fish Plates) ಮತ್ತು ಇತರ ಭಾಗಗಳನ್ನು ತೆಗೆದು ಮತ್ತೆ ಅಳವಡಿಸಿರುವುದು ಗಮನಕ್ಕೆ ಬಂದಿದ್ದು, ರೈಲ್ವೆ ಸಿಬ್ಬಂದಿಗಳಾದ ಸುಭಾಷ್ ಪೊದಾರ್, ಮನೀಶ್ ಮಿಸ್ತ್ರಿ, ಶುಭಂ ಜಯಸ್ವಾಲ್ ಎಂಬುವವರನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಬಾಡಿಗೆಗಿದ್ದ ಮಹಿಳೆಯ ಮನೆಯ ಬಾತ್‍ರೂಮ್, ಬೆಡ್‍ರೂಮ್‍ನಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ ಕಾಮುಕ ಅರೆಸ್ಟ್
ಮೂವರ ಸಿಬ್ಬಂದಿಗಳನ್ನು ತನಿಖೆ ನಡೆಸಿದಾಗ ಬೆಳಗಿನ ಜಾವ 5:15ರ ಸುಮಾರಿಗೆ ಕಿಮ್ ಮತ್ತು ಕೊಸಾಂಬಾ ಗ್ರಾಮಗಳ ನಡುವಿನ ಹಳಿಯ ಬಳಿ ಮೂವರು ಓಡಿ ಹೋಗುವುದನ್ನು ಗಮನಿಸಿದ್ದೇವೆ. ಜೊತೆಗೆ ರೈಲು ಹಳಿಯಲ್ಲಿ 71 ಎಲಾಸ್ಟಿಕ್ ರೈಲ್ ಕ್ಲಿಪ್ ಕೀಗಳು (Elastic Rail Clip Keys) ಮತ್ತು ಎರಡು ಫಿಶ್ ಪ್ಲೇಟ್‌ಗಳನ್ನು ತೆಗೆದುಹಾಕಲಾಗಿರುವುದು ಕಂಡುಬಂದಿದೆ ಹಾಗೂ ಅದಾದ 25 ನಿಮಿಷಗಳಲ್ಲಿ ಅವುಗಳು ಮತ್ತೆ ಅಳವಡಿಸಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಸೂರತ್ ಎಸ್ಪಿ ಹಿತೇಶ್ ಜೋಯ್ಸರ್ ಮಾತನಾಡಿ, ಇಷ್ಟು ಕಡಿಮೆ ಅವಧಿಯಲ್ಲಿ ಅಳವಡಿಸಿರುವುದು ಅನುಮಾನ ಉಂಟು ಮಾಡಿತ್ತು. ಬಳಿಕ ಮೂವರ ಫೋನ್‌ಗಳನ್ನು ಪರಿಶೀಲಿಸಿದಾಗ ಫೋನ್‌ನ ಬಿನ್‌ನಲ್ಲಿ ತೆಗೆದ ಭಾಗಗಳ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಲಭ್ಯವಾಗಿದೆ. ಫೋಟೋಗಳು ರಾತ್ರಿ 2 ರಿಂದ 3 ನಡುವೆ ತೆಗೆದಿರುವುದು ಗೊತ್ತಾಗಿದೆ. ಇದನ್ನು ಪ್ರಶ್ನಿಸಿದಾಗ ವಿವರಣೆ ಅಸಾಧ್ಯವಾದಾಗ ಅವರು ಭಾಗಿಯಾಗಿರುವುದು ಅನುಮಾನ ಉಂಟು ಮಾಡಿತ್ತು. ಮತ್ತಷ್ಟು ಪ್ರಶ್ನೆ ಮಾಡಿದಾಗ ನಿಜವಾದ ವಿವರ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಹಳಿತಪ್ಪಿಸುವ ಯತ್ನದಂತೆ ತೋರಲು ಹಳಿಗಳ ಭಾಗಗಳನ್ನು ತೆಗೆದಿದ್ದಾರೆ. ಜೊತೆಗೆ ಅವುಗಳ ವೀಡಿಯೊ ಮತ್ತು ಫೋಟೋವನ್ನು ತೆಗೆದುಕೊಂಡಿದ್ದಾರೆ. ಅಪಘಾತವನ್ನು ತಪ್ಪಿಸಲು ಪ್ರಶಂಸೆ ಪಡೆಯುವ ಪ್ರಯತ್ನದಲ್ಲಿ ತೆಗೆದಿದ್ದ ಹಳಿ ಭಾಗಗಳನ್ನು ಮತ್ತೆ ಅಳವಡಿಸಿದ್ದು, ತನಿಖೆಯ ವೇಳೆ ಕಂಡು ಬಂದಿದೆ ಎಂದು ತಿಳಿಸಿದರು.
ಸದ್ಯ ಪೊಲೀಸರು ಪ್ರಕರಣವನ್ನು ವಿಶೇಷ ಕಾರ್ಯಾಚರಣೆ ತಂಡಕ್ಕೆ ತನಿಖೆಯನ್ನು ಹಸ್ತಾಂತರಿಸಿದ್ದಾರೆ. ಪೊಲೀಸರು ಆರೋಪಿಯನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ‘ಲಾಪತಾ ಲೇಡಿಸ್’ ಬೆನ್ನಲ್ಲೇ ಆಸ್ಕರ್‌ಗೆ ಪ್ರವೇಶ ಪಡೆದ ‘ಸ್ವಾತಂತ್ರ‍್ಯ ವೀರ್ ಸಾವರ್ಕರ್’ ಚಿತ್ರ