ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮತ್ತೊಂದು ಕಾರು ಹಾಗೂ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ ಬೊಗಳೆರಹಟ್ಟಿ ಬಳಿ ನಡೆದಿದೆ.
ಅಪಘಾತದಲ್ಲಿ ಮೃತರಾದವರು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಂಗಾರಕ್ಕನಗುಡ್ಡದ ಕಾಂಗ್ರೆಸ್ ಮುಖಂಡ ಕೇಶವಮೂರ್ತಿ (40), ನಾಗಮ್ಮ (30) ಮತ್ತು ರಾಧಿಕಾ (22) ಎಂದು ಗುರುತಿಸಲಾಗಿದೆ.
ಮೃತರು ಜಗಳೂರಿನಿಂದ ಚಿತ್ರದುರ್ಗಕ್ಕೆ ಖಾಸಗಿ ಕಾರ್ಯಕ್ರಮ ನಿಮ್ಮಿತ್ತ ತೆರಳುತಿದ್ದರು. ಆದರೆ ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯಿಂದಾಗಿ ಕಾರು ನಿಯಂತ್ರಣ ತಪ್ಪಿ ಬೊಗಳೆರಹಟ್ಟಿ ಬಳಿ ಮತ್ತೊಂದು ಕಾರು ಮತ್ತು ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊಂದು ಕಾರಿನಲ್ಲಿದ್ದ ಓರ್ವ ಮಹಿಳೆಗೂ ಕೂಡ ಗಂಭೀರ ಗಾಯಗಳಾಗಿದ್ದು, ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ತುರುವನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಘಟನಾ ಸ್ಥಳಕ್ಕೆ ಜಗಳೂರಿನ ಮಾಜಿ ಶಾಸಕ ರಾಜೇಶ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv