ಚಿತ್ರದುರ್ಗ: ಲಾರಿ ಮತ್ತು ಕಾರ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಾಡನಾಯಕಹಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ
ಮೃತರನ್ನು ಮಂದಾರ (19), ರುಕ್ಮಿಣಿ(20) ಮತ್ತು ನೆವಿಲ್(26) ಅಂತ ಗುರುತಿಸಲಾಗಿದೆ. ಮೃತರು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕೋಮರಗನಘಟ್ಟದವರಾಗಿದ್ದು, ಇವರು ಬೆಂಗಳೂರಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಐವರು ಕಾರಿನಲ್ಲಿ ಬಾಗಲಕೋಟೆಯ ಸಂಬಂಧಿಯ ಮದುವೆಗೆ ಹೋಗಿದ್ದರು. ಬಳಿಕ ಮದುವೆ ಮುಗಿಸಿಕೊಂಡು ಸುಮಾರು ತಡರಾತ್ರಿ 2.30ಕ್ಕೆ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಮಾಡನಾಯಕಹಳ್ಳಿಯ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಕಾರಿನ ಚಾಲಕ ಅತೀ ವೇಗವಾಗಿ ಬಂದು ಲಾರಿಗೆ ಡಿಕ್ಕಿ ಹೊಡೆದಿದ್ದಾನೆ.
ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದಾರೆ. ಮನೋಹರ್ ಮತ್ತು ಮಹೇಂದ್ರರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಆಸ್ಪತ್ರೆಗೆ ಎಸ್‍ಪಿ ಶ್ರೀನಾಥ್ ಎಂ ಜೋಷಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆ ತುರುವನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.