ಭುವನೇಶ್ವರ್: ಕಾಲೇಜು ಯುವತಿಯರನ್ನು ರೇಗಿಸಿ ಅಶ್ಲೀಲವಾಗಿ ಕಾಮೆಂಟ್ ಮಾಡಿದ ಮೂವರು ಯುವಕರನ್ನು ಸಾರ್ವಜನಿಕರು ಹಿಡಿದು ಥಳಿಸಿದ ಘಟನೆ ಒಡಿಶಾದ ಆಂಗಲ್‍ನಲ್ಲಿ ನಡೆದಿದೆ.
ಕಾಲೇಜು ಯುವತಿಯರು ಛೆಂಡಿಪಾಡಾ ಎಟಿಎಂನಲ್ಲಿ ಹಣ ತೆಗೆಯುತ್ತಿದ್ದರು. ಈ ವೇಳೆ ಮೂವರು ಯುವಕರು ಬೈಕಿನಲ್ಲಿ ಬಂದು ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಹೀಗೆ ಕಾಮೆಂಟ್ ಮಾಡುವುದನ್ನು ಮುಂದುವರಿಸಿದಾಗ ಅಲ್ಲೇ ಇದ್ದ ಸೆಕ್ಯೂರಿಟಿ ಗಾರ್ಡ್ ಪ್ರಶ್ನಿಸಿದ್ದಾರೆ.
ಯುವತಿಯರಿಗೆ ಕಾಮೆಂಟ್ ಮಾಡುತ್ತಿರುವುದು ಹಾಗೂ ಸೆಕ್ಯೂರಿಟಿ ಗಾರ್ಡ್ ಅವರನ್ನು ತಡೆಯುತ್ತಿರುವ ಎಲ್ಲಾ ಘಟನೆಗಳನ್ನು ಗಮನಿಸುತ್ತಿದ್ದ ಸ್ಥಳೀಯರು, ಕೂಡಲೇ ಯುವಕರನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ.
ಕೂಡಲೇ ಘಟನೆಯ ಮಾಹಿತಿ ಅರಿತ ಛೆಂಡಿಪಾಡಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಸ್ಥಳೀಯರಿಂದ ಯುವಕರನ್ನು ರಕ್ಷಿಸಿದ್ದಾರೆ. ನಂತರ ಆ ಮೂವರನ್ನು ವಶಕ್ಕೆ ಪಡೆದು ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದಾರೆ.