ಬ್ರಿಟಿಷರ ಕಾಲದ ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದ ಕಾನೂನಿನ ಬದಲಿಗೆ ರೂಪಿಸಲಾಗಿರುವ ಹೊಸ ಕಾನೂನು ಇಂದಿನಿಂದ ಜಾರಿಗೆ ಬಂದಿದೆ. ಭಾರತೀಯ ದಂಡ ಸಂಹಿತೆಯು (IPC) ಭಾರತೀಯ ನ್ಯಾಯ ಸಂಹಿತೆಯಾಗಿ (BNS), ಅಪರಾಧ ಪ್ರಕ್ರಿಯಾ ಸಂಹಿತೆಯು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಾಗಿ ಮತ್ತು ಸಾಕ್ಷ್ಯ ಕಾಯ್ದೆಯು ಭಾರತೀಯ ಸಾಕ್ಷ್ಯ ಕಾಯ್ದೆಯಾಗಿ ಜಾರಿಗೆ ಬಂದಿದೆ. ಈ ಮೂಲಕ ಹೊಸ ಕ್ರಿಮಿನಲ್ ಕಾನೂನುಗಳು (New Criminal Laws) ದೇಶದ ಅಪರಾಧ ನ್ಯಾಯ ವ್ಯವಸ್ಥೆಯನ್ನು ವಸಾಹತು ಕಾಲದ ಜಡತ್ವದಿಂದ ಹೊರತರುತ್ತದೆ ಎಂಬುದು ಕೇಂದ್ರ ಸರ್ಕಾರದ ಪ್ರತಿಪಾದನೆ. ಹೊಸ ಕಾನೂನು ಪ್ರಯೋಗಕ್ಕೆ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಇನ್ಪೆಕ್ಟರ್‌ಗಳಿಗೆ ತರಬೇತಿ ನೀಡಲಾಗಿದೆ. ಕಾನೂನು ತಜ್ಞರು, ಹಿರಿಯ ಅಧಿಕಾರಿಗಳು, ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಹಾಗೂ ಹಿರಿಯ ವಕೀಲರಿಂದ ತರಬೇತಿ ಕೊಡಿಸಲಾಗಿದೆ. ಸಿವಿಲ್ ಪೊಲೀಸ್ ಅಧಿಕಾರಿಗಳು (Civil Police Officers) ಹಾಗೂ ಸಿಬ್ಬಂದಿ ಆದ್ಯತೆ ಮೇರೆಗೆ ತರಬೇತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
163 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ದಂಡ ಸಂಹಿತೆ 126 ವರ್ಷಗಳ ಹಿಂದಿನ ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು 151 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಈ ಮೂರು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಈ ಕಾನೂನುಗಳಲ್ಲಿ 20 ಹೊಸ ಅಪರಾಧಗಳ ಸೇರ್ಪಡೆಯಾಗಿದೆ. 33 ಅಪರಾಧಗಳಿಗೆ ಶಿಕ್ಷೆ ಪ್ರಮಾಣ ಹೆಚ್ಚಿಸಲಾಗಿದೆ. 83 ಅಪರಾಧಗಳಿಗೆ ಅಧಿಕ ದಂಡ ವಿಧಿಸುವ ಜೊತೆಗೆ 23 ಅಪರಾಧಗಳಿಗೆ ಕಠಿಣ ಶಿಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.
Advertisement
Advertisement
ಅಷ್ಟಕ್ಕೂ ಏನಿದು ಕ್ರಿಮಿನಲ್ ಕಾನೂನು? ಹೊಸ ಕಾನೂನಿನಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ? ಯಾವ ಅಪರಾಧಗಳಿಗೆ ಯಾವ ಶಿಕ್ಷೆ ವಿಧಿಸಲಾಗುತ್ತದೆ ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
Advertisement
2020ರಲ್ಲಿ ಕಾನೂನು ಪರಿಣತರ ಸಮಿತಿ ರಚನೆ:
ಕೇಂದ್ರ ಸರ್ಕಾರವು (Central Government) 2020ರ ಮಾರ್ಚ್‌ನಲ್ಲಿ ಐಪಿಸಿ, ಸಿಆರ್‌ಪಿಸಿ ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್ ಅನ್ನು ಪರಿಷ್ಕರಿಸಲು ಅಪರಾಧ ಕಾನೂನು ಸುಧಾರಣಾ ಸಮಿತಿ ರಚಿಸಿತ್ತು. ದೆಹಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಆಗಿನ ಉಪ ಕುಲಪತಿ ಪ್ರೊಫೆಸರ್ ಡಾ.ರಣಬೀರ್ ಸಿಂಗ್ ನೇತೃತ್ವದ ಸಮಿತಿಯು, ಎನ್‌ಎಲ್‌ಯು-ಡಿಯ ಹಿಂದಿನ ರಿಜಿಸ್ಟ್ರಾರ್ ಪ್ರೊ ಡಾ ಜಿ.ಎಸ್ ಬಾಜಪಾಯಿ, ಡಿಎನ್‌ಎಲ್‌ಯುದ ಉಪ ಕುಲಪತಿ ಪ್ರೊ.ಡಾ.ಬಾಲರಾಜ್ ಚೌಹಾಣ್, ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, ದೆಹಲಿಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನಿವೃತ್ತ ಜಡ್ಜ್ ಜಿ.ಪಿ ಥರೇಜಾ ಅವರನ್ನ ಒಳಗೊಂಡಿತ್ತು. 2022ರ ಫೆಬ್ರವರಿಯಲ್ಲಿ ಸಮಿತಿಯು ಸಾರ್ವಜನಿಕರ ಸಲಹೆಗಳನ್ನು ಪಡೆದ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಅಪರಾಧ ಕಾನೂನುಗಳ ಸಮಗ್ರ ಪರಾಮರ್ಶೆಗೆ ಪ್ರಕ್ರಿಯೆ ಆರಂಭಿಸಿರುವುದಾಗಿ ರಾಜ್ಯಸಭೆಗೆ ಕಾನೂನು ಸಚಿವಾಲಯ 2022ರ ಏಪ್ರಿಲ್‌ನಲ್ಲಿ ತಿಳಿಸಿತ್ತು.
Advertisement
ಭಯೋತ್ಪಾದನೆಗೆ ಹೊಸ ವ್ಯಾಖ್ಯಾನ:
ಭಯೋತ್ಪಾದನೆಯನ್ನು ಮೊದಲ ಬಾರಿಗೆ ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೆಕ್ಷನ್ 113 (1) ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ವ್ಯಾಖ್ಯಾನಿಸಲಾಗಿದೆ. ಭಾರತದಲ್ಲಿ ಅಥವಾ ಯಾವುದೇ ವಿದೇಶದಲ್ಲಿ ಭಾರತದ ಏಕತೆ, ಸಮಗ್ರತೆ ಮತ್ತು ಭದ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಯಾವುದೇ ಕೃತ್ಯವನ್ನು ಎಸಗುವ ವ್ಯಕ್ತಿಯನ್ನು ಈ ಕಾನೂನಿನಲ್ಲಿ ಭಯೋತ್ಪಾದಕ ಎಂದು ವ್ಯಾಖ್ಯಾನಿಸಲಾಗುತ್ತದೆ. ಅಲ್ಲದೇ ಹೊಸ ಕಾಯ್ದೆಗಳಲ್ಲಿ ಸಂಘಟಿತ ಭಯೋತ್ಪಾದನೆಯನ್ನು ವ್ಯಾಖ್ಯಾನ ಮಾಡಲಾಗಿದೆ. ದೇಶದ್ರೋಹ ಪದವನ್ನು ಬದಲಿಸಿ, ವಿಶ್ವಾಸದದ್ರೋಹ ಪದ ಬಳಸಲಾಗಿದೆ.
ಅತ್ಯಾಚಾರಕ್ಕೆ ಮರಣ ದಂಡನೆ ಶಿಕ್ಷೆ:
ಭಾರತೀಯ ನ್ಯಾಯ ಸಂಹಿತೆ ಲೈಂಗಿಕ ಅಪರಾಧಗಳನ್ನು ಪರಿಹರಿಸಲು ‘ಮಹಿಳೆ ಮತ್ತು ಮಕ್ಕಳ ವಿರುದ್ಧದ ಅಪರಾಧಗಳು’ ಎಂಬ ಅಧ್ಯಾಯವನ್ನು ಪರಿಚಯಿಸಿದೆ. ಇದಲ್ಲದೆ, ಸಂಹಿತೆ 18 ವರ್ಷದೊಳಗಿನ ಬಾಲಕಿಯರ ಅತ್ಯಾಚಾರಕ್ಕೆ ಸಂಬಂಧಿಸಿದ ನಿಬಂಧನೆಗಳಿಗೆ ಮಾರ್ಪಾಡುಗಳನ್ನು ಶಿಫಾರಸು ಮಾಡುತ್ತದೆ. ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ನಿಬಂಧನೆಯನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ)ಗೆ ಅನುಗುಣವಾಗಿ ಮಾಡಲಾಗಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಕನಿಷ್ಠ 20 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಸಾಮೂಹಿಕ ಅತ್ಯಾಚಾರಕ್ಕೂ 20 ವರ್ಷಗಳ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಗೆ ಅವಕಾಶವಿದೆ. ಇದಲ್ಲದೆ ಮದುವೆ, ಉದ್ಯೋಗ, ಬಡ್ತಿಯ ನೆಪದಲ್ಲಿ ಅಥವಾ ಯಾವುದೇ ಆಮಿಷದ ಮೂಲಕ ಮಹಿಳೆಯರ ಲೈಂಗಿಕ ಶೋಷಣೆಯನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ.
ಗುಂಪು ಹತ್ಯೆಗೆ ಶಿಕ್ಷೆಯ ಹೆಚ್ಚಳ:
ಮೊದಲ ಬಾರಿಗೆ ಮೂಲ ಮಸೂದೆಯು ಗುಂಪು ಹತ್ಯೆ ಮತ್ತು ದ್ವೇಷದ ಅಪರಾಧಗಳನ್ನು ಪ್ರತ್ಯೇಕ ರೀತಿಯ ಕೊಲೆಗಳೆಂದು ವರ್ಗೀಕರಿಸಿದೆ. ಈ ಕಾಯ್ದೆಯು ಗುಂಪು ಹತ್ಯೆಯಂತಹ ಅಪರಾಧಗಳಿಗೆ ಗರಿಷ್ಠ ಮರಣದಂಡನೆ ವಿಧಿಸಲು ಬಯಸುತ್ತದೆ.
ದೇಶ ವಿರೋಧಿ ಕೃತ್ಯಗಳಿಗೆ ಜೀವಾವಧಿ ಶಿಕ್ಷೆ:
ʻಸಶಸ್ತ್ರ ದಂಗೆ ಅಥವಾ ವಿಧ್ವಂಸಕ ಚಟುವಟಿಕೆಗಳಿಗೆʼ ಸಂಬಂಧಿಸಿದ ಕೃತ್ಯಗಳ ಸಂದರ್ಭದಲ್ಲಿ ಕಾನೂನುಗಳು ಕಠಿಣ ಶಿಕ್ಷೆಯನ್ನು ಒದಗಿಸುತ್ತವೆ. ಅಕ್ರಮ ಚಟುವಟಿಕೆಗಳು ಅಥವಾ ಪ್ರತ್ಯೇಕತಾವಾದಿ ಚಟುವಟಿಕೆಗಳ ಭಾವನೆಗಳನ್ನು ಪ್ರೋತ್ಸಾಹಿಸುವುದು ಅಥವಾ ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವ ಯಾವುದೇ ಕೃತ್ಯದಲ್ಲಿ ತೊಡಗಿದರೆ ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷಗಳವರೆಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗುತ್ತದೆ. ಹಾಗೂ ಗರಿಷ್ಠ ಪ್ರಮಾಣದ ದಂಡ ವಿಧಿಸಬಹುದು.
45 ದಿನಗಳ ಒಳಗೆ ಕೋರ್ಟ್ ತೀರ್ಪು:
ಹೊಸ ಕಾಯ್ದೆಗಳ ಪ್ರಕಾರ ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣೆ ಮುಗಿದು, 45 ದಿನಗಳ ಒಳಗೆ ಕೋರ್ಟ್ ತೀರ್ಪು ನೀಡಬೇಕು. ಕೋರ್ಟ್‌ನಲ್ಲಿ ಮೊದಲ ವಿಚಾರಣೆ ನಡೆದು 60 ದಿನಗಳ ಒಳಗೆ ಪೊಲೀಸರು ಆರೋಪ ಪಟ್ಟಿ ಸಲ್ಲಿಸಬೇಕು. ಅತ್ಯಾಚಾರ ಪ್ರಕರಣಗಳ ಸಂತ್ರಸ್ತರ ಹೇಳಿಕೆಯನ್ನು ಆಕೆಯ ಸಂಬಂಧಿಕರ ಸಮ್ಮುಖದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೇ ದಾಖಲಿಸಬೇಕು. ವೈದ್ಯಕೀಯ ವರದಿ 7 ದಿನಗಳ ಒಳಗೆ ಬರಬೇಕು. ಜೊತೆಗೆ 3 ವರ್ಷಕ್ಕಿಂತ ಕಡಿಮೆ ಜೈಲು ಶಿಕ್ಷೆಗೆ ಒಳಪಡುವ ಪ್ರಕರಣಗಳಿಗೆ ಸಾಮಾನ್ಯ ವಿಚಾರಣೆ ಸಾಕಾಗುತ್ತದೆ. ಇದರಿಂದ ಸೆಷನ್ ಕೋರ್ಟ್‌ಗಳಲ್ಲಿನ ಪ್ರಕರಣಗಳು ಶೇ. 40ರಷ್ಟು ಕಡಿಮೆಯಾಗಲಿವೆ. ಶೂನ್ಯ ಎಫ್‌ಐಆರ್ ದಾಖಲಿಸುವ ಪದ್ಧತಿಯನ್ನು ಸಾಂಸ್ಥಿಕಗೊಳಿಸಲಾಗಿದೆ. ಎಲ್ಲೇ ಘಟನೆ ನಡೆದರೂ ಎಲ್ಲಿ ಬೇಕಾದರೂ ಎಫ್‌ಐಆರ್ ದಾಖಲಿಸಬಹುದಾಗಿದೆ.
ಭಾರತೀಯರೇ ರೂಪಿಸಿದ ಕಾನೂನು:
ಹೊಸ ಕಾನೂನುಗಳ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ʻಈ ಕಾನೂನುಗಳು ಭಾರತೀಯರೇ ಭಾರತೀಯರಿಗಾಗಿ ರೂಪಿಸಿದ ಕಾನೂನು, ಭಾರತೀಯ ಸಂಸತ್ತು ಇವುಗಳನ್ನು ಅಂಗೀಕರಿಸಿದೆ. ತನ್ಮೂಲಕ ಬ್ರಿಟಿಷ್ ಕಾಲದ ಕ್ರಿಮಿನಲ್ ಕಾಯ್ದೆಗಳಿಗೆ ವಿದಾಯ ಹೇಳಲಾಗಿದೆ. ಇದರೊಂದಿಗೆ ಎಲ್ಲವೂ ಭಾರತೀಯವೇ ಆಗಿದೆ ಎಂದು ಶ್ಲಾಘಿಸಿದ್ದಾರೆ.
420 ಅಲ್ಲ 318 ಎಂದು ಹೇಳಬೇಕು: ಯಾವ ಸೆಕ್ಷನ್ ಏನು ಹೇಳುತ್ತೆ?
420 – ಹಣಕಾಸು ಅಥವಾ ಬೇರೆ ಯಾವುದೇ ಆಮಿಷ ಒಡ್ಡಿ ವಂಚಿಸಿದ ಆರೋಪದ ಅಡಿ ಐಪಿಸಿ ಸೆಕ್ಷನ್ 420ರ ಅಡಿ ಕೇಸ್ ದಾಖಲಾಗುತ್ತಿತ್ತು. ಇದೀಗ ಬಿಎನ್‌ಎಸ್‌ನಲ್ಲಿ ಸೆಕ್ಷನ್ 318 ಆಗಿದೆ.
302 – ಭಾರತೀಯ ದಂಡ ಸಂಹಿತೆಯಲ್ಲಿ ಕೊಲೆ ಪ್ರಕರಣಕ್ಕೆ ಈ ಸೆಕ್ಷನ್ ಬಳಸಲಾಗುತ್ತಿತ್ತು. ಇದೀಗ ಭಾರತೀಯ ನ್ಯಾಯ ಸಂಹಿತೆಯಲ್ಲಿ 103 ಆಗಿದೆ.
307 – ಭಾರತೀಯ ದಂಡ ಸಂಹಿತೆಯಲ್ಲಿ ಕೊಲೆ ಯತ್ನಕ್ಕೆ ಬಳಸಲಾಗುತ್ತಿತ್ತು. ಇದೀಗ ಸೆಕ್ಷನ್ 103 ಆಗಿದೆ.
376 – ಭಾರತೀಯ ದಂಡ ಸಂಹಿತೆಯಲ್ಲಿ ಅತ್ಯಾಚಾರ ಪ್ರಕಣಗಳಿಗೆ ಈ ಸೆಕ್ಷನ್ ಬಲಸಲಾಗುತ್ತಿತ್ತು. ಇದೀಗ 64 ಆಗಿದೆ.
304(ಬಿ) – ಐಪಿಸಿ ನಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಬಳಸುತ್ತಿದ್ದ ಸೆಕ್ಷನ್ ಈಗ ಬಿಎನ್‌ಎಸ್‌ನಲ್ಲಿ 80 ಆಗಿದೆ.
304(ಎ) – ಐಪಿಸಿ ನಲ್ಲಿ ನಿರ್ಲಕ್ಷ್ಯದಿಂದ ಮರಣ (ರಸ್ತೆ ಅಪಘಾತ ಅಥವಾ ಇತರೇ ಸಂದರ್ಭ) ವೇಳೆ ಬಳಸಲಾಗುತ್ತಿತ್ತು. ಇದೀಗ ಬಿಎನ್‌ಎಸ್‌ನಲ್ಲಿ 106 ಆಗಿದೆ.
359 – ವ್ಯಕ್ತಿ ಅಪಹರಣ ಪ್ರಕರಣದಲ್ಲಿ ಐಪಿಸಿ ನಲ್ಲಿ ಈ ಸೆಕ್ಷನ್ ಬಳಕೆಯಾಗುತ್ತಿತ್ತು. ಈಗ ಸೆಕ್ಷನ್ 137 ಆಗಿದೆ.
309 – ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದರೆ ಆತನ ವಿರುದ್ಧ ಐಪಿಸಿ ಅಡಿ ಈ ಸೆಕ್ಷನ್ ವಿಧಿಸಲಾಗುತ್ತಿತ್ತು. ಈಗ ಬಿಎನ್‌ಎಸ್ ಅಡಿ 226 ಆಗಿದೆ.