ಬೆಂಗಳೂರು: ಮೂವರು ಅತೃಪ್ತರ ಶಾಸಕರ ಅನರ್ಹತೆ ಹಾಗೂ 14 ಶಾಸಕರ ರಾಜೀನಾಮೆ ಪ್ರಕರಣ ಕಾಯ್ದಿರಿಸಿರುವ ಸ್ಪೀಕರ್ ರಮೇಶ್ ಕುಮಾರ್ ಅವರ ನಡೆ ದೋಸ್ತಿ ನಾಯಕರ ಪಾಲಿಗೆ ವರದಾನವಾಗಿದೆ. ಎಲ್ಲಾ ಮುಗೀತು ಎಂದು ವಿಪಕ್ಷ ಸ್ಥಾನಕ್ಕೆ ಕೂರಲು ಯೋಚನೆಯಲ್ಲಿದ್ದವರಿಗೆ ಸ್ಪೀಕರ್ ಆದೇಶ ನಿಟ್ಟುಸಿರು ಬಿಡುವಂತೆ ಮಾಡಿದೆ.
ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥವಾಗುವವರೆಗೂ ಬಿಜೆಪಿ ಸರ್ಕಾರ ರಚನೆ ಮಾಡುವಂತೆ ಕಾಣುತ್ತಿಲ್ಲ. ಇತ್ತ ಸ್ಪೀಕರ್, ಅತೃಪ್ತರ ರಾಜೀನಾಮೆ ಪ್ರಕ್ರಿಯೆಯನ್ನು ನಿಯಮಾನುಸಾರ ಮುಗಿಸಲು ಮುಂದಾಗಿದ್ದಾರೆ. ಇದಕ್ಕೆ ಕನಿಷ್ಠ ಒಂದು ವಾರವಾದರೂ ಬೇಕಾಗುವ ಸಾಧ್ಯತೆ ಇದೆ. ಸದ್ಯ ಮೂವರ ತಲೆದಂಡ ಕಂಡು ಬೆದರಿರುವ ಉಳಿದ ಅತೃಪ್ತ ಶಾಸಕರು ಬಂಡಾಯದ ಬಾವುಟ ಇಳಿಸಿ ಪಕ್ಷಕ್ಕೆ ಮರಳಿದರೂ ಅಚ್ಚರಿಯಿಲ್ಲ ಎಂಬ ಮಾತು ದೋಸ್ತಿ ವಲಯದಲ್ಲಿ ಕೇಳಿ ಬಂದಿದೆ. ಒಂದು ವೇಳೆ ಈ ನಡೆಗೆ ಅತೃಪ್ತ ಶಾಸಕರು ಮುಂದಾದರೆ ದೋಸ್ತಿಗಳ ಪಾಲಿಗೆ ಮತ್ತೊಂದು ಸುತ್ತಿನ ಸಮ್ಮಿಶ್ರ ಆಟಕ್ಕೆ ವೇದಿಕೆ ಸಿಕ್ಕಂತಾಗಬಹುದು ಎಂಬ ಮಾತು ರಾಜಕೀಯ ವಲಯದಿಂದ ಕೇಳಿ ಬಂದಿದೆ.
ಇತ್ತ ಮೂವರು ಶಾಸಕರ ಅನರ್ಹ ಬಗ್ಗೆ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕಿಡಿಕಾರಿದ್ದಾರೆ. ಮೂವರು ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿದ್ದಾರೆ. ಉಳಿದವರನ್ನು ಯಾಕೆ ಅನರ್ಹ ಮಾಡಿಲ್ಲ. ಇದರ ಹಿಂದೆ ರಾಜಕೀಯ ದುರುದ್ದೇಶವಿದೆ. ಅಲ್ಲದೆ ಉಳಿದವರಿಗೆ ಸಂದೇಶ ರವಾನಿಸಲು ಈ ರೀತಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಇದಿಗೆ ಹಂಗಾಮಿ ಸಿಎಂ ಆಗಿರುವ ಕುಮಾರಸ್ವಾಮಿ ಅವರು ನಿನ್ನೆಯಷ್ಟೇ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಇತ್ತ ದಿಢೀರ್ ಬೆಳವಣಿಗೆಯಲ್ಲಿ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದಾರೆ. ಮೈತ್ರಿ ಸರ್ಕಾರ ಪತನ ಬಳಿಕ ಡಿಕೆಶಿ ದೆಹಲಿ ಭೇಟಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.