– ರವೀಶ್ ಎಚ್.ಎಸ್
ರಾಜಕಾರಣದಲ್ಲಿ ಕುಟಿಲತೆ ಹಾಗೂ ಕಠಿಣತೆ ಇದೆ. ಶಕುನಿಗಳತಂಹ ಕ್ಯಾರೆಕ್ಟರ್‍ಗಳು ಬಹಳ. ರಾಜಕೀಯ ಚದುರಂಗದಾಟದಲ್ಲಿ ಯಾರು ಯಾವಾಗ ಯಾವ ಪಾನ್ ಬೇಕಾದರೂ ಮುನ್ನಡೆಸಬಹುದು. ಕೆಲವು ಸಂದರ್ಭದಲ್ಲಿ ಘಟಾನುಘಟಿ ಆನೆ ಅಂತಹ ಪಾನ್‍ಗಳೇ ಸೈನಿಕ, ಒಂಟೆ, ಕುದುರೆಗಳಂತಹ ಪಾನ್‍ಗಳ ಚಕ್ರವ್ಯೂಹಕ್ಕೆ ಸಿಲುಕಿ ಆಟದಿಂದ ಹೊರಕ್ಕೆ ತಳಲ್ಪಡುತ್ತವೆ. ಇದೆಲ್ಲ ಗೊತ್ತಿರುವ ವಿಚಾರವೇ. ಆದರೆ ಇದು ಪಕ್ಷದಿಂದ ಪಕ್ಷಕ್ಕೆ ನಡೆಯುವ ಪಂದ್ಯವಾದರೆ ಸಮಸ್ಯೆಯೇನೂ ಇಲ್ಲ. ಈ ಚದುರಂಗದಾಟ ಒಂದು ಪಕ್ಷದೊಳಗೆ ನಡೆದುಬಿಟ್ಟರೆ ಮಾತ್ರ ಕಷ್ಟ.
Advertisement
ಅಂದಹಾಗೆ ಕರ್ನಾಟಕದ ಕಮಲ ಪಕ್ಷದೊಳಗೆ ಕುಟಿಲ ಚದುರಂಗದಾಟದ ಮೈದಾನ ಸೃಷ್ಟಿಯಾಗಿಬಿಟ್ಟಿದೆ. ಚಟವೋ, ಹಟವೋ ಎಂಬಂತೆ ಒಬ್ಬನ ಕಾಲನ್ನು ಮತ್ತೊಬ್ಬ ಎಳೆಯಲು ಶುರು ಮಾಡಿದ್ದಾರೆ. ನಾನಾ ನೀನಾ ಎನ್ನುತ್ತಾ ಹಾವು-ಏಣಿಯಾಟಕ್ಕಿಳಿದಿದ್ದಾರೆ ರಾಜ್ಯ ಬಿಜೆಪಿ ನಾಯಕರು. ಮೇಲ್ನೋಟಕ್ಕೆ ಇದು ಸುಳ್ಳು ಎಂದು ಉದ್ಗಾರಿಸುವ ನಾಯಕರೇ ತಮ್ಮ ಜತೆಗಾರರ ಬಳಿ ಕುಳಿತಾಗ ಸತ್ಯವನ್ನೇ ಹೇಳಿರೋದು ಬಿಡಿ ಅಂತಾ ಗಹಗಹಿಸಿ ನಗುತ್ತಾರೆ. ಇದಕ್ಕೆಲ್ಲ ಕಾರಣ ಒಂದು ಮನೆಯೊಳಗಣ ಮೂರು ಯಜಮಾನಿಕೆಯ ಅವತಾರ ಸೃಷ್ಟಿಯಾಗಿರೋದು. ಒಂದು ಹೈಕಮಾಂಡ್, ಇನ್ನೊಂದು ಯಡಿಯೂರಪ್ಪ, ಯಜಮಾನಿಕೆ. ಮಗದೊಂದು ಹೈಕಮಾಂಡ್+ಯಡಿಯೂರಪ್ಪ ಮಧ್ಯೆ ನಿಂತ ಬಿ.ಎಲ್.ಸಂತೋಷ್.
Advertisement
ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂಬುದು ತುಂಬಾ ಹಳೆಯ ಡೈಲಾಗ್. ಬರೀ ವಿಧಾನಸೌಧ ಮಾತ್ರ ಅಲ್ಲ ಬಿಜೆಪಿ ನಾಯಕರು ನಡುಗುತ್ತಿದ್ದ ಕಾಲವಿತ್ತು. ಆದರೀಗ ರಾಜಕಾರಣದಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ನಡುಗುವ, ನಡುಗಿಸುವ ಕಾಲ ಮಗ್ಗಲು ಬದಲಿಸಿದೆ. 2 ಸೀಟು ಇದ್ದ ಬಿಜೆಪಿಯನ್ನ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ತಂದ ಗಟ್ಟಿತನದ ರಾಜಕಾರಣಿ ಯಡಿಯೂರಪ್ಪ ಅನ್ನೋದು ಸತ್ಯ. ಆದರೆ ಅದೇ ಯಡಿಯೂರಪ್ಪ ಕೆಲ ಜೊಳ್ಳುತನದ ಕೆಟ್ಟ ನಿರ್ಧಾರಗಳನ್ನ ತೆಗೆದುಕೊಂಡಿದ್ದು, ಕೆಲ ತಪ್ಪುಗಳನ್ನು ಮಾಡಿದ್ದು ಅಷ್ಟೇ ಸತ್ಯ ಅನ್ನೋದನ್ನು ಒಪ್ಪಿಕೊಳ್ಳಬೇಕು. ಅಡ್ವಾಣಿ, ಮುರಳಿ ಮನೋಹರ ಜೋಷಿ ಅಂತಹ ಘಟಾನುಘಟಿ ನಾಯಕರು ತೆರೆಮರೆಗೆ ಸರಿದಾಗಲೇ ಯಡಿಯೂರಪ್ಪರಂತಹ ನಾಯಕರು ತೆರೆಗೆ ಸರಿದು ಬಿಡ್ತಾರೆ ಅನ್ನುತ್ತಿದ್ದರು. ಆದರೆ ಕರ್ನಾಟಕದ ರಾಜಕೀಯ ಪರಿಸ್ಥಿತಿ, ಸಮೂಹ ನಾಯಕನಿಲ್ಲದ ಬಿಜೆಪಿಯ ಸ್ಥಿತಿ ಯಡಿಯೂರಪ್ಪರನ್ನ ಕಡೆಗಣಿಸಲು ಸಾಧ್ಯವಾಗಲಿಲ್ಲ. ತೆರೆಮರೆಗೆ ಸರಿಸದೇ ಇದ್ದರೂ ತೊಗಲು ಗೊಂಬೆಯಾಟದಂತ ರೀತಿ ತೆರೆಯ ಮೇಲೆ ನಿಯಂತ್ರಿತವಾಗಿ ವಿಜೃಂಭಿಸ್ತಿದ್ದಾರೆ ಯಡಿಯೂರಪ್ಪ. ಮೂರು ಅಧಿಕಾರ ಕೇಂದ್ರಗಳ ನಿಯಂತ್ರಣದಿಂದಲೇ ನಿಯಂತ್ರಿತ ವಿಜೃಂಭಣೆ ಆಗುತ್ತಿರುವುದು ಅಂತಾ ರಾಜಕೀಯ ಪಡಸಾಲೆಯಲ್ಲಿ ಸದ್ದು ಮಾಡುತ್ತಿದೆ.
Advertisement
Advertisement
ಸಂತೋಷ್ ಒಂದು ಕಾಲದಲ್ಲಿ ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದರು. ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೇ ಯಡಿಯೂರಪ್ಪಗೆ ಮತ್ತಷ್ಟು ಹತ್ತಿರವಾದ್ರು. ಪಕ್ಷ ಮತ್ತು ಸಂಘದ ಸಂಪರ್ಕ ಸೇತುವಾಗಿ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಆದರೆ ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಇಬ್ಬರ ಸಂಬಂಧ ಅಷ್ಟಕ್ಕಷ್ಟೇ ಎನ್ನುವಂತಾಯ್ತು ಅಂತಾ ಬಿಎಸ್‍ವೈ ಆಪ್ತರು ಹೇಳ್ತಾರೆ. ಅಲ್ಲಿಂದ ಯಡಿಯೂರಪ್ಪ ಕುರ್ಚಿಯಿಂದ ಇಳಿದ ಮೇಲೆ ಇಬ್ಬರ ನಡುವಿನ ಅಂತರ ಮತ್ತಷ್ಟು ಹೆಚ್ಚಾಗಿ ಪಕ್ಷ ಬಿಟ್ಟ ಬಳಿಕವೂ ಅಂತರ ಬೃಹದಾಕಾರವಾಗಿ ಬೆಳದಿತ್ತು ಅನ್ನೋದಂತೂ ಸುಳ್ಳಲ್ಲ. ಆದರೀಗ ಇನ್ನಷ್ಟು ರಾಜಕೀಯ ಪಥ ಬದಲಿಸಿದೆ. ಯಡಿಯೂರಪ್ಪ ವಾಪಸ್ ಪಕ್ಷಕ್ಕೆ ಬಂದು ನಾನಾ ಸರ್ಕಸ್, ನಾನಾ ಆಪರೇಷನ್ ಮಾಡಿ ಮತ್ತೆ ಪಕ್ಷವನ್ನ ಈಗ ಅಧಿಕಾರಕ್ಕೆ ತಂದಿದ್ದಾರೆ. ಇದೇ ಯಡಿಯೂರಪ್ಪ ಮನೆಗೆ ಸಂತೋಷ್ ಬಂದು ಮಾತುಕತೆ ಮಾಡಿ ಹೋಗುತ್ತಾರೆ. ಆದರೂ ಯಜಮಾನಿಕೆ ವಿಷಯ ಬಂದಾಗ ಮಾತ್ರ ಇದೇ ಸಂತೋಷ್, ಇದೇ ಯಡಿಯೂರಪ್ಪ ವಿಭಿನ್ನ ದಾರಿಯಲ್ಲಿ ಓಡಲು ಶುರು ಮಾಡುತ್ತಾರೆ. ಇವರಿಬ್ಬರ ದಾರಿಗಳು ಬೇರೆಯಾದರೆ, ಆಗಾಗ್ಗೆ ಅಚ್ಚರಿಗಳನ್ನ ಕೊಡುವುದರಲ್ಲಿ ಎತ್ತಿದ ಕೈ ಎನ್ನುವ ಮೋದಿ, ಅಮಿತ್ ಷಾ ಜೋಡಿಯದ್ದು ಕೂಡ ಇನ್ನೊಂದು ದಾರಿ. ಈ ಮೂರು ಯಜಮಾನಿಕೆಯ ಮೂರು ದಾರಿಗಳು ಕಮಲ ಮನೆಯ ಮನಸ್ಸುಗಳನ್ನ ಒಡೆದು ಚೂರು ಮಾಡಿವೆ ಅಂದರೂ ತಪ್ಪಾಗಲಾರದು.
ಯಜಮಾನಿಕೆಯ ವಿಚಾರ ಪ್ರಸ್ತಾಪಕ್ಕೆ ಕಾರಣ ಇಷ್ಟೆ. ಸಂಪುಟ ವಿಸ್ತರಣೆಯಲ್ಲಿ ಆದ ಗೊಂದಲ. ಯಡಿಯೂರಪ್ಪ ಹೋಗಿ 10+3 ಸುತ್ರದಲ್ಲಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆದುಕೊಂಡು ಬಂದರು. ಸ್ವತಃ ಯಡಿಯೂರಪ್ಪ ಅವರೇ ಮಾಧ್ಯಮದ ಮುಂದೆ ಸೂತ್ರವನ್ನ ಘೋಷಣೆ ಮಾಡಿದ್ದರು. ಆದರೂ ಕೂಡ ದೆಹಲಿಯಲ್ಲಿ ಕುಳಿತ ಒಂದು ಗುಂಪು ಮಾತ್ರ ನೋಡ್ತಾ ಇರಿ. ಬರೀ 10 ಶಾಸಕರು ಸಚಿವರಾಗುವುದು ಅಂತಾ ನಸುನಗುತ್ತಿದ್ದರಂತೆ. ಯಡಿಯೂರಪ್ಪ ಕರ್ನಾಟಕದಲ್ಲಿ ರಾಜಕೀಯ ಮಾಡುತ್ತಿದ್ದರೆ, ದೆಹಲಿಯಲ್ಲಿ ಸಂತೋಷ್ ಕರ್ನಾಟಕದ ರಾಜಕೀಯವನ್ನು ಸಹ ಮಾಡುತ್ತಿದ್ದಾರೆ ಅನ್ನೋ ಮಾತುಗಳಿವೆ. ಬಿಜೆಪಿಯಲ್ಲಿ ಸಂತೋಷ್ ಬಳಗ ಗಟ್ಟಿಯಾಗುತ್ತಿದೆ. ಸಂಘಟನಾ ವಿಷಯ ಬಂದಾಗಲಂತೂ ಈಗ ಸಂತೋಷ್ ಪಡೆಯೇ ಮುಂದೆ. ಇನ್ನೊಂದೆಡೆ ಯಡಿಯೂರಪ್ಪ ಅವರಿಗೆ ಪುತ್ರನ ಭವಿಷ್ಯ ಬಿಟ್ಟು ಪಕ್ಷದ ಬೇರೆ ವಿಚಾರಗಳಿಗೆ ತಲೆಕೆಡಿಸಿಕೊಳ್ಳುತ್ತಿಲ್ಲವೇನೋ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಸಂಘಟನೆ ವಿಚಾರದಲ್ಲಿ ಯಾವುದಕ್ಕೂ ಹಸ್ತಕ್ಷೇಪ ಮಾಡದೇ ಯಡಯೂರಪ್ಪ ಸುಮ್ಮನಾಗಿದ್ದಾರೆ ಅನ್ನೋದು ಬಹು ಚರ್ಚಿತ ವಿಚಾರ. ನನ್ನ ವಿಜೃಭಂಣೆ ಸಾಕು. ಅಧಿಕಾರ ಮುಗಿದ ಬಳಿಕ ನಿವೃತ್ತಿಯಾಗಿಬಿಡಬೇಕು ಎನ್ನುವಂತೆ ಬಾಸವಾಗುವಂತೆ ಪಕ್ಷದ ಚಟುವಟಿಕೆಗಳ ಬಗ್ಗೆ ಯಡಿಯೂರಪ್ಪಗೆ ಈಗ ಅಷ್ಟಕಷ್ಟೆ.
ಈ ನಡುವೆ ಬಿಜೆಪಿ ಹೈಕಮಾಂಡ್‍ಗೆ ಯಡಿಯೂರಪ್ಪ ಮೇಲಿನ ನಂಬಿಕೆಗಿಂತ ಸಂತೋಷ್ ಮೇಲಿನ ನಂಬಿಕೆ ದೊಡ್ಡದು ಅಂದುಕೊಂಡಿರಬಹುದು. ಆ ಕಾರಣಕ್ಕಾಗಿಯೇ ಸಂತೋಷ್ ಮಾತನ್ನ ಗಂಭೀರವಾಗಿ ಪರಿಗಣಿಸ್ತಾರೆ ಅನ್ನೋ ವಾದವೂ ಇದೆ. ಸಹಜವಾಗಿಯೇ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಗಿರುವುದರಿಂದ ಬಿ.ಎಲ್.ಸಂತೋಷ್ ಮೋದಿ, ಷಾ, ನಡ್ಡಾ ಜತೆ ಸಿಕ್ಕ ಸಿಕ್ಕಾಗಲೆಲ್ಲ ಮಾತನಾಡಬಹುದು. ಆದರೆ ಬೆಂಗಳೂರಲ್ಲಿ ಕೂರುವ ಯಡಿಯೂರಪ್ಪಗೆ ಸಮಯ ಕೊಡಬೇಕಾದರೆ ಬಹಳಷ್ಟು ಯೋಚನೆ ಮಾಡ್ತಾರೆ ಅನ್ನೋದು ಅಷ್ಟೇ ಸತ್ಯ. ಹಾಗಾಗಿ ಕರ್ನಾಟಕ ಬಿಜೆಪಿಯ ವಿಚಾರಕ್ಕೆ ಆಗಿರಬಹುದು, ರಾಜ್ಯ ಸರ್ಕಾರದ ವಿಚಾರಕ್ಕೆ ಆಗಿರಬಹುದು ಒಂದು ನಿರ್ಧಾರಕ್ಕೆ ಮೂರು ಯಜಮಾನಿಕೆಗಳು ಅಡ್ಡ ನಿಲ್ಲುತ್ತಿವೆ. ಕಮಲ ಮನೆಯೊಳಗಿನ ಮೂರು ಯಜಮಾನಿಕೆಯ ಹಾವು-ಏಣಿ ಆಟ ನಿಂತಾಗ ಮಾತ್ರ ಹೊರಗಿನ ಎದುರಾಳಿಗಳನ್ನ ಎದುರಿಸಬಹುದು. ಇಲ್ಲದಿದ್ದರೆ ಭವಿಷ್ಯದ ಬಿಜೆಪಿಯ ರಾಜಕೀಯ ನಡೆ ಕಷ್ಟ.
ಹೂಚೆಂಡು: ಯಡಿಯೂರಪ್ಪ ಮಾತು ಕೇಳಿಕೊಂಡು ಮೂವರು ಶಾಸಕರು ಸಚಿವರಾಗುವುದಕ್ಕೆ ಹೊಸ ಬಟ್ಟೆ ಹೊಲಿಸಿಕೊಂಡು ಸಿದ್ಧವಾಗಿದ್ದರಂತೆ. ಆದ್ರೆ ಇದನ್ನ ನೋಡಿದ ದೆಹಲಿಯಲಿದ್ದ ರಾಜ್ಯ ಬಿಜೆಪಿಯ ಒಂದು ಗುಂಪು ಅವರ ಹೊಸ ಬಟ್ಟೆ ಯುಗಾದಿಗೆ ಹೊರತು ಸಚಿವರಾಗಲು ಅಲ್ಲ ಅಂತಾ ಮುಸಿಮುಸಿ ನಗುತ್ತಿದ್ದರಂತೆ. ಇದು ಗೊತ್ತಾಗಿ ತಿರುಗುಬಾಣ ಆಗುತ್ತೆ ನೋಡುತ್ತಾ ಇರಿ ನಾವು ಕಾಯುತ್ತೇವೆ ಅಂತಾ ವಂಚಿತರು ಹಲ್ಲು ಕಡಿಯುತ್ತಿದ್ದಾರಂತೆ.