ತವರಿಗೆ ಹುತಾತ್ಮ ಯೋಧರ ಪಾರ್ಥಿವ ಶರೀರ; ಗುರುವಾರ ಕುಂದಾಪುರದಲ್ಲಿ ಸೈನಿಕ ಅನೂಪ್‌ ಅಂತ್ಯಸಂಸ್ಕಾರ

Public TV
1 Min Read
karnataka soldiers bodies

ಉಡುಪಿ: ಜಮ್ಮು ಕಾಶ್ಮೀರದ (Jammu Kashmir) ಪೂಂಚ್‌ನಲ್ಲಿ ನಡೆದ ದುರಂತದಲ್ಲಿ ಹುತಾತ್ಮರಾದ ಕರ್ನಾಟಕದ (Karnataka) ಸೈನಿಕರ ಪಾರ್ಥಿವ ಶರೀರಗಳು ತವರಿಗೆ ತಲುಪಲಿವೆ.

ಇಂದು ತಡರಾತ್ರಿ ಉಡುಪಿಯ ಅನೂಪ್ ಪೂಜಾರಿ ಅವರ ಪಾರ್ಥಿವ ಶರೀರ ಕೂಡ ತವರಿಗೆ ಬರಲಿದೆ. ರಾತ್ರಿ 3 ಗಂಟೆ ನಂತರ ಉಡುಪಿಗೆ ಆಗಮನ ಸಾಧ್ಯತೆ ಇದೆ. ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪಾರ್ಥಿವ ಶರೀರ ಇರಿಸಲಾಗುವುದು.

ದಯಾನಂದ ತಿರಕನ್ನವರ್, ಅನುಪ್‌, ಮಹೇಶ್ ಮರಿಗೊಂಡ ಮೃತ ಸೈನಿಕರು

ಬೆಳಗ್ಗೆ ಕುಂದಾಪುರ ತಾಲೂಕಿಗೆ ರವಾನೆಯಾಗಲಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅನೂಪ್ ಅಂತಿಮ ಯಾತ್ರೆ ನಡೆಯಲಿದೆ. ಕುಂದಾಪುರದ ಬೀಜಾಡಿ ವರೆಗೆ ಪಾರ್ಥಿವ ಶರೀರ ಮೆರವಣಿಗೆ ಸಾಗಲಿದೆ. ಸುಮಾರು 5,000 ಜನ ಭಾಗಿಯಾಗುವ ನಿರೀಕ್ಷೆ ಇದೆ. ಅಂತಿಮ ಯಾತ್ರೆ ಮುಗಿಸಿ ಹುತಾತ್ಮ ಯೋಧನ ದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗುವುದು.

ಬೀಜಾಡಿ ಗ್ರಾಮದ ಮನೆಯಲ್ಲಿ ಅಂತಿಮ ವಿಧಿವಿಧಾನ ನಡೆಯಲಿದ್ದು, ಕುಟುಂಬದ ಆಪ್ತರಿಗೆ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೀಜಾಡಿ ಪಡು ಸರ್ಕಾರಿ ಶಾಲೆ ಮೈದಾನದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಇರಲಿದೆ. ಆಪ್ತರು, ಸಾರ್ವಜನಿಕರು, ಜನಪ್ರತಿನಿಧಿಗಳಿಗೆ ಅಂತಿಮ ನಮನಕ್ಕೆ ಅವಕಾಶ ಕಲ್ಪಿಸಲಾಗುವುದು.

ಬೀಜಾಡಿ ಕಡಲ ತೀರದಲ್ಲಿ ಅನೂಪ್ ಅಂತ್ಯಸಂಸ್ಕಾರ ನಡೆಯಲಿದೆ. ಸಮುದ್ರ ತೀರದ ಸರ್ಕಾರಿ ಜಮೀನಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಮುದ್ರ ತೀರದಲ್ಲಿ ಅನೂಪ್ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಲಾಗುವುದು. ಅಂತಿಮ ವಿಧಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಸೇನಾ ಸಿಬ್ಬಂದಿ ಭಾಗಿಯಾಗಲಿದ್ದಾರೆ. ಗುರುವಾರ ಮಧ್ಯಾಹ್ನ ಅಂತ್ಯಸಂಸ್ಕಾರ ಪ್ರಕ್ರಿಯೆ ನಡೆಯಲಿದೆ.

Share This Article