– ಮೈಸೂರಿನಲ್ಲಿ ಮನೆ ಗೋಡೆ ಕುಸಿತ
ಮೈಸೂರು/ರಾಯಚೂರು: ರಾಯಚೂರು(Raichur) ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದ್ದು ನಾನಾ ಅವಾಂತರ ಸೃಷ್ಟಿಸಿದೆ. ಲಿಂಗಸುಗೂರು(Lingasugur) ತಾಲೂಕಿನ ಪರಾಂಪುರ ತಾಂಡಾದಲ್ಲಿ ಗಾಳಿಗೆ ಟಿನ್ ಶೆಡ್ ಮನೆ ಕುಸಿದು ಬಿದ್ದು ಮನೆಯಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ.
ಟಿನ್ ಹಾರಿ ಹೋಗದಂತೆ ಇಟ್ಟಿದ್ದ ಸಿಮೆಂಟ್ ಇಟ್ಟಿಗೆಗಳು ಮೈ ಮೇಲೆ ಬಿದ್ದು ಗಾಯಗಳಾಗಿವೆ. ಪರಾಂಪುರ ತಾಂಡಾದ ನಾರಾಯಣ ಎಂಬುವರ ಟಿನ್ ಶೆಡ್ ಮನೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ನಾರಾಯಣ ಮತ್ತವರ ಮಗ ಉಮೇಶ್ ಹಾಗೂ ಮೊಮ್ಮಗ ಸಂದೀಪ್‌ಗೆ ಗಾಯಗಳಾಗಿವೆ. ಇದನ್ನೂ ಓದಿ: ಜನೌಷಧಿ ಕೇಂದ್ರಗಳ ಪುನರಾರಂಭಕ್ಕೆ ಸಂಸದ ಕಾರಜೋಳ ಆಗ್ರಹ
ಗಾಯಾಳುಗಳನ್ನ ಲಿಂಗಸುಗೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಮುಂದುವರೆದಿದೆ. ಇದನ್ನೂ ಓದಿ: Bengauru Rains Photo Gallery – ಮತ್ತೆ ಮಳೆಯಾಗಿದೆ…!
ಮೈಸೂರಿನ ಹಲವೆಡೆ ಧಾರಾಕಾರ ಮಳೆ:
ಇನ್ನೂ ಮೈಸೂರಿನ(Mysuru) ಹಲವೆಡೆ ಧಾರಾಕಾರ ಮಳೆಯಾಗಿದ್ದು, ರಾತ್ರಿಯಿಡೀ ಸುರಿದ ಮಳೆಗೆ ಜಿಲ್ಲೆಯ ಹುಣಸೂರು(Hunasuru) ತಾಲೂಕು ಕೊಳಘಟ್ಟ ಗ್ರಾಮದ ಕರಗಮ್ಮ ಎಂಬುವವರಿಗೆ ಸೇರಿದ ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದಿದೆ. ಮಧ್ಯರಾತ್ರಿ ಮನೆಯವರು ಮಲಗಿದ್ದ ವೇಳೆ ಗೋಡೆ ಕುಸಿದಿದ್ದು, ಕೂಡಲೇ ಮನೆಯವರು ಹೊರಬಂದಿದ್ದಾರೆ. ಹೊರ ಬರುತ್ತಿದ್ದಂತೆ ಮನೆಯ ಮೇಲ್ಛಾವಣಿಯೂ ಕುಸಿದಿದೆ. ಸದ್ಯ ಕುಟುಂಬಸ್ಥರು ಅಪಾಯದಿಂದ ಪಾರಾಗಿದ್ದು, ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.