ಚಾಮರಾಜನಗರ: ಕಾಡು ಪ್ರಾಣಿಗಳಿಗೆ ಬೇಸತ್ತು ಬಂಡೀಪುರ ಅರಣ್ಯಕ್ಕೆ ಬೆಂಕಿ ಹಾಕಿರೋದಾಗಿ ಬಂಧಿತ ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಕಳ್ಳೀಪುರದ ಅರುಣ್, ಚೌಡಹಳ್ಳಿಯ ಹನುಮಂತಯ್ಯ ಮತ್ತು ಗೋಪಾಲಯ್ಯ ಬಂಧಿತರು. ಅರಣ್ಯಾಧಿಕಾರಿಗಳ ವಿಚಾರಣೆ ವೇಳೆ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಬಂಡೀಪುರ ಅರಣ್ಯದಂಚಿನ ಚೌಡಹಳ್ಳಿ, ಕಲೀಗೌಡನಹಳ್ಳಿ, ಹಂಗಳ ಮೊದಲಾದ ಕಡೆ ಹುಲಿ, ಚಿರತೆ, ಆನೆ ಗ್ರಾಮದತ್ತ ಮುಖ ಮಾಡಿದ್ದವು. ಸತತ ನಾಲ್ಕೈದು ದಿನ ಕಾರ್ಯಚರಣೆ ನಡೆಸಿದ್ರೂ ಆತಂಕ ಮೂಡಿಸಿದ್ದ ಹುಲಿಯನ್ನು ಸೆರೆಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ವಿಫಲವಾಗಿದ್ದರು. ಹುಲಿಗೆ ಹೆದರಿದ ಕಾಡಂಚಿನ ಗ್ರಾಮಸ್ಥರು ಅರಣ್ಯಕ್ಕೆ ಬೆಂಕಿ ಹಾಕಿದ್ದಾರೆ.
ಬೆಂಕಿ ಬಿದ್ದ ಜಾಗದ ಸ್ಯಾಟಲೈಟ್ ಚಿತ್ರಗಳಲ್ಲಿ ಇದು ಮಾನವ ನಿರ್ಮಿತ ಎನ್ನುವುದು ಬೆಳಕಿಗೆ ಬಂದಿತ್ತು. ಅಷ್ಟೇ ಅಲ್ಲದೇ ಗುಂಪು ಗುಂಪುಗಳಾಗಿ ಬೆಂಕಿ ಬಿದ್ದಿರೋದ್ರಿಂದ ಅನುಮಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಅರಣ್ಯಾಧಿಕಾರಿಗಳು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
2,500 ಎಕರೆ ಅರಣ್ಯ ಪ್ರದೇಶ ಮಾತ್ರ ಕಾಡ್ಗಿಚ್ಚಿನಿಂದ ಭಸ್ಮವಾಗಿದೆ ಎಂಬ ಸುಳ್ಳು ಮಾಹಿತಿಯನ್ನು ಅರಣ್ಯ ಇಲಾಖೆ ಸರ್ಕಾರಕ್ಕೆ ನೀಡಿದೆ. ಅರಣ್ಯ ನಾಶದ ಬಗ್ಗೆ ಸಮೀಕ್ಷೆ ನಡೆಸಿರುವ ಇಸ್ರೋ ಬೆಂಕಿಗೆ ಭಸ್ಮವಾದ ಒಟ್ಟು ಪ್ರದೇಶ 10,920 ಎಕರೆ (4,420 ಹೆಕ್ಟೇರ್) ಎಂದು ತಿಳಿಸಿದೆ. ಬೆಂಕಿ ನಂದಿಸಲು ವಿಫಲವಾದ ಅರಣ್ಯಾಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv