ತುಮಕೂರು: ಖಾಸಗಿ ಬಸ್ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ತುಮಕೂರು ನಗರದ ಹೊರವಲಯದಲ್ಲಿರುವ ಬೆಂಳಗುಂಬದಲ್ಲಿ ನಡೆದಿದೆ.
ಮಾರುತಿ, ದೀಪು ಹಾಗೂ ಶಬ್ಬಾಸ್ ಮೃತ ದುರ್ದೈವಿಗಳು. ಅಪಘಾತದಲ್ಲಿ ವಸಂತಕುಮಾರ್ ಎಂಬವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರಲ್ಲಿ ದೀಪು ಹಾಗೂ ಮಾರುತಿ ಹನಮುಂತಪುರದ ನಿವಾಸಿಗಳಾಗಿದ್ದು, ಶಬ್ಬಾಸ್ ನಜರಾಬಾದ್ ನಿವಾಸಿ ಎಂದು ತಿಳಿದುಬಂದಿದೆ. ಆಟೋದಲ್ಲಿದ್ದವರು ದೇವರಾಯನದುರ್ಗ ದಿಂದ ತುಮಕೂರು ನಗರಕ್ಕೆ ಬರುತ್ತಿದ್ದರು. ಖಾಸಗಿ ಬಸ್ ಊರ್ಡಿಗೆರೆ ಕಡೆ ಹೊರಟಿತ್ತು. ಈ ಸಂದರ್ಭದಲ್ಲಿ ಬೆಳಗುಂಬದ ಕೆಂಪೇಗೌಡ ಕಾಲೇಜಿನ ಬಳಿ ಇರುವ ತಿರುವಿನಲ್ಲಿ ಪರಸ್ಪರ ವಾಹನ ಕಾಣದೇ ಇದ್ದುದರಿಂದ ವೇಗವಾಗಿ ಬಂದು ಮುಖಾಮುಖಿ ಡಿಕ್ಕಿ ಹೊಡೆದಿವೆ ಎನ್ನಲಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಆಟೋದಲ್ಲಿದ್ದ ನಾಲ್ವರಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಾಳು ವಸಂತಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸಂಬಂಧ ಕ್ಯಾತಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.