ಹೈದರಾಬಾದ್: ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ಇಂದು ಹಠಾತ್ ಪ್ರವಾಹ ಸಂಭವಿಸಿದ್ದು, ಮೂವರು ಸಾವನ್ನಪ್ಪಿ, 30 ಮಂದಿ ನಾಪತ್ತೆಯಾಗಿದ್ದಾರೆ.
ಅಣೆಕಟ್ಟು ಒಡೆದು ಚೆಯ್ಯೆರು ನದಿ ಉಕ್ಕಿ ಹರಿಯುವ ಮೂಲಕ ಹಲವಾರು ಗ್ರಾಮಗಳು ಜಲಾವೃತಗೊಂಡಿವೆ. ನಂದಲೂರಿನ ಸ್ವಾಮಿ ಆನಂದ ದೇವಸ್ಥಾನವೂ ಮುಳುಗಡೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ.
ದಕ್ಷಿಣ ಕರಾವಳಿ ಆಂಧ್ರಪ್ರದೇಶ ಮತ್ತು ರಾಯಲಸೀಮಾದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಹೋರಾಟದಿಂದ ಮೃತಪಟ್ಟ ರೈತರಿಗೆ 25 ಲಕ್ಷ ರೂಪಾಯಿ ಪರಿಹಾರ ಕೊಡಿ: ಸಿದ್ದರಾಮಯ್ಯ
ತಿರುಮಲದಲ್ಲಿ ಕೂಡ ಭಾರೀ ಪ್ರವಾಹ ಉಂಟಾಗಿದ್ದು, ನೂರಾರು ಯಾತ್ರಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ತಿರುಮಲ ಬೆಟ್ಟದ ಮುಖ್ಯ ದೇವಾಲಯಕ್ಕೆ ಹೊಂದಿಕೊಂಡಿರುವ ನಾಲ್ಕು ಬೀದಿಗಳು ಜಲಾವೃತಗೊಂಡಿದ್ದು, ಪ್ರವಾಹದ ನೀರು ನೆಲದಿಂದ ಎತ್ತರಕ್ಕೆ ತುಂಬಿದ್ದು, ಜನರು ಓಡಾಡಲು ಸಹ ಪರದಾಡುತ್ತಿರುವುದನ್ನು ಕಾಣಬಹುದಾಗಿದೆ. ತಿರುಮಲ ಬೆಟ್ಟದಲ್ಲಿ ಹಲವಾರು ಮರಗಳು ನೆಲಕ್ಕುರುಳಿದ್ದು, ಪಾಪವಿನಾಶನಂ ಮತ್ತು ಶ್ರೀವಾರಿ ಪಾದಾಲು ಮುಂತಾದ ಸ್ಥಳಗಳಲ್ಲಿ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದೆ.
ಇದೀಗ ಎನ್‍ಡಿಆರ್‌ಎಫ್ ಮತ್ತು ಎಸ್‍ಡಿಆರ್‌ಎಫ್ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕ್ರಮ ಕೈಗೊಂಡಿವೆ. ಇನ್ನೂ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸಿದ್ದು, ರಕ್ಷಣಾ ಮತ್ತು ಪರಿಹಾರ ಕ್ರಮಗಳನ್ನು ಹೆಚ್ಚಿಸುವಂತೆ ನಿರ್ದೇಶಿಸಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ಮಗುವಿನ ಮುದ್ದಾದ ಫೋಟೋ ಶೇರ್ ಮಾಡಿದ ನಟಿ