ಬೆಂಗಳೂರು: ಶುಕ್ರವಾರ ಸ್ಯಾಂಡಲ್‍ವುಡ್‍ನಲ್ಲಿ ಗಣೇಶ ಹಬ್ಬಕ್ಕೆ ವಿಶೇಷವಾಗಿ ಮೂರು ವಿಭಿನ್ನ ಕಥಾಹಂದರವನ್ನು ಒಳಗೊಂಡಿರುವ ಸಿನಿಮಾಗಳು ಬೆಳ್ಳಿ ಪರದೆಯಲ್ಲಿ ರಾರಾಜಿಸಲಿವೆ. ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ `ಸಾಹೇಬ’, ನಿಧಿ ಸುಬ್ಬಯ್ಯ ನಟನೆಯ `5ಜಿ’ ಮತ್ತು ಅನಂತನಾಗ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ `ಮಾರ್ಚ್ 22′ ಸಿನಿಮಾಗಳು ತೆರೆಕಾಣಲಿವೆ.
1.ಸಾಹೇಬ:
ಸಾಹೇಬ ಸಿನಿಮಾದಲ್ಲಿ ಮನೋರಂಜನ್ ಗೆ ಜೊತೆಯಾಗಿ ಸಾನ್ವಿ ಶ್ರೀವಾತ್ಸವ್ ಕಾಣಿಸಿಕೊಂಡಿದ್ದು, ನಿರ್ದೇಶಕ ಭರತ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾಗೆ ವಿ.ಹರಿಕೃಷ್ಣ ಸಂಗೀತವಿದೆ. ಸಿನಿಮಾ ಒಟ್ಟು 5 ಹಾಡುಗಳನ್ನು ಹೊಂದಿದ್ದು, ಈಗಾಗಲೇ ತನ್ನ ಸಂಗೀತದ ಮೂಲಕ ಸಾಹೇಬ ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಚಿತ್ರತಂಡ ಮಾತ್ರ ಇದೂವರೆಗೂ ಸಿನಿಮಾದ ಕಥೆಯನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ.
2. 5ಜಿ:
ಇನ್ನೂ ನಿಧಿಸುಬ್ಬಯ್ಯ ಮತ್ತು ಸಿಂಪಲ್ ಪ್ರವೀಣ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ 5ಜಿ ಸಹ ನಾಳೆ ತೆರೆಕಾಣಲಿದೆ. ಬಾಲಿವುಡ್‍ಗೆ ಹೋಗಿ ಬಂದ ನಿಧಿ ಈಗ ಮತ್ತೆ ಕನ್ನಡದಲ್ಲೇ ಸೆಟ್ಲ್ ಆಗುವಂತೆ ಕಾಣುತ್ತಿದೆ. ಈಗಾಗಲೇ “ನನ್ನ ನಿನ್ನ ಪ್ರೇಮಕತೆ’ ಚಿತ್ರದಲ್ಲಿ ನಟಿಸಿರುವ ನಿಧಿ ಈಗ “5ಜಿ’ಗೂ ನಾಯಕಿಯಾಗಿದ್ದಾರೆ. ಸಿನಿಮಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಗಳಾಗಿ ನಿಧಿ ಸುಬ್ಬಯ್ಯ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಈಗಿನ ವ್ಯವಸ್ಥೆ, ಗಾಂಧೀಜಿಯ ಕನಸು, ಗಾಂಧೀಜಿ ಈಗ ಬಂದರೆ ಏನಾಗಬಹುದು ಎಂಬ ಕಥೆಯನ್ನು ಸಿನಿಮಾ ಒಳಗೊಂಡಿದೆ.
3.ಮಾರ್ಚ್ 22:
ಮಂಗಳೂರು ಮೂಲದ ದುಬೈ ಉದ್ಯಮಿ ಹರೀಶ್ ಶೇರಿಗಾರ್ ಹಾಗೂ ಅವರ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ, ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ನಿರ್ದೇಶನದ ಬಹು ನಿರೀಕ್ಷಿತ ‘ಮಾರ್ಚ್ 22’ ಸಿನಿಮಾ ನಾಳೆ ಚಿತ್ರಮಂದಿರಗಳಿಗೆ ಲಗ್ಗೆಯಿಡಲಿದೆ. ಜೀವ ಜಲದ ಮಹತ್ವ ಸಾರುವ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಆರ್ಯವರ್ಧನ್ ಮತ್ತು ಕಿರಣ್ ರಾಜ್ ನಾಯಕರಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಮೇಘಶ್ರೀ ಮತ್ತು ದೀಪ್ತಿ ಶೆಟ್ಟಿ ನಾಯಕಿಯರು. ಉಳಿದಂತೆ ನಟ ಅನಂತ್ ನಾಗ್, ವಿನಯಾ ಪ್ರಸಾದ್, ಗೀತಾ, ಶರತ್ ಲೋಹಿತಾಶ್ವ, ಅಶೀಷ್ ವಿದ್ಯಾರ್ಥಿ, ಸಾಧು ಕೋಕಿಲಾ, ಜೈಜಗದೀಶ್ ತಾರಾಗಣದಲ್ಲಿದ್ದಾರೆ.