ಸಾಂದರ್ಭಿಕ ಚಿತ್ರ
ಅಹಮದಾಬಾದ್: ಗುಜರಾತ್ ರಾಜ್ಯದ ಅಮ್ರೇಲಿ ಜಿಲ್ಲೆಯಲ್ಲಿರುವ ಗಿರ್ ಅರಣ್ಯಪ್ರದೇಶದಲ್ಲಿ ರೈಲು ಡಿಕ್ಕಿ ಹೊಡೆದು ಮೂರು ಸಿಂಹಗಳು ಸಾವನ್ನಪ್ಪಿವೆ.
ಸಂರಕ್ಷಿತ ಸಿಂಹಗಳ ಅರಣ್ಯ ಪ್ರದೇಶವಾಗಿರುವ ಗಿರ್ ಅರಣ್ಯ ಪ್ರದೇಶದಲ್ಲಿ ಮತ್ತೆ ಮೂರು ಸಿಂಹಗಳು ಸಾವನ್ನಪ್ಪಿವೆ. ಮಂಗಳವಾರ ಸಾವರ್ ಕುಡ್ಲ ತಾಲೂಕಿನ ಬೋರಾಲ ಗ್ರಾಮದ ಬಳಿ ರೈಲ್ವೆ ಹಳಿ ಮೇಲೆ ಆರು ಸಿಂಹಗಳು ಸಂಚರಿಸುತ್ತಿದ್ದವು. ಈ ವೇಳೆ ಏಕಾಏಕಿ ಬಂದ ರೈಲು ಸಿಂಹಗಳ ಗುಂಪಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂರು ಸಿಂಹಗಳು ಸ್ಥಳದಲ್ಲೇ ಮೃತಪಟ್ಟರೇ, ಮತ್ತೆ ಮೂರು ಸಿಂಹಗಳು ತಪ್ಪಿಸಿಕೊಂಡಿವೆ. ಸಾವನ್ನಪ್ಪಿರುವ ಸಿಂಹಗಳ ಪೈಕಿ ಎರಡು ಗಂಡು ಹಾಗೂ ಒಂದು ಹೆಣ್ಣು ಸಿಂಹವೆಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯ ಅರಣ್ಯಾಧಿಕಾರಿ ದುಶ್ಯಂತ್ ವಸವದ್, ಮಂಗಳವಾರ ಬೋಟಡ್‍ನಿಂದ ಪಿಪವಾವ್ ಕಡೆಗೆ ಹೊರಟಿದ್ದ ಗೂಡ್ಸ್ ಟ್ರೈನ್ ಗಿರ್ ಅರಣ್ಯಪ್ರದೇಶದಲ್ಲಿ ಸಿಂಹಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂರು ಸಿಂಹಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ರೈಲು ಅತಿ ವೇಗದಲ್ಲಿತ್ತೇ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ. ಅಲ್ಲದೇ ಸಿಂಹಗಳ ಚಲನವಲನ ವೀಕ್ಷಿಸಲು ನೇಮಿಸಿದ್ದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದ್ದರ ಕುರಿತಾಗಿಯೂ ತನಿಖೆ ನಡೆಯುತ್ತಿದೆ. ಒಂದು ವೇಳೆ ಅವರ ತಪ್ಪು ಕಂಡುಬಂದರೇ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆಂದು ಹೇಳಿದ್ದಾರೆ.
ಸಿಂಹಗಳ ವಾಸಸ್ಥಾನವೆಂದೇ ಹೆಸರಾಗಿರುವ ಗಿರ್ ಅರಣ್ಯಪ್ರದೇಶದಲ್ಲಿ ಸೆಪ್ಟಂಬರ್ ತಿಂಗಳಿನಿಂದ ಇದೂವರೆಗೂ 30 ಸಿಂಹಗಳು ಸಾವನ್ನಪ್ಪಿದೆ. ಕೆಲವು ಸಿಂಹಗಳು ಪರಸ್ಪರ ಕಿತ್ತಾಡಿಕೊಂಡು ಸಾವನ್ನಪ್ಪಿದ್ದರೇ, ಇನ್ನೂ ಕೆಲವು ನಿಗೂಢವಾಗಿ ಸಾವನ್ನಪ್ಪಿದ್ದವು. ಈ ಬಗ್ಗೆ ಖುದ್ದು ಗುಜರಾತ್ ಸರ್ಕಾರ ತಲೆಕೆಡಿಸಿಕೊಂಡಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv