ನವದೆಹಲಿ: ನಕಲಿ ಆಧಾರ್ ಕಾರ್ಡ್‌ಗಳನ್ನು (Fake Adhar Card) ಬಳಸಿ ಸಂಸತ್ ಪ್ರವೇಶಿಸಲು ಯತ್ನಿಸಿದ ಮೂವರನ್ನು ಭದ್ರತಾ ಸಿಬ್ಬಂದಿ ಇಂದು ಬಂಧಿಸಿದ್ದಾರೆ.
ದೆಹಲಿ ಪೊಲೀಸರು ಫೋರ್ಜರಿ ಮತ್ತು ವಂಚನೆ ಆರೋಪದ ಮೇಲೆ ಮೂವರು ಆರೋಪಿಗಳಾದ ಕಾಸಿಂ, ಮೋನಿಸ್ ಮತ್ತು ಸೋಯೆಬ್‌ನನ್ನು ಬಂಧಿಸಿದ್ದಾರೆ.
ಈ ಮೂವರು ಕ್ಯಾಶುಯಲ್ ಪ್ರವೇಶ ಪಾಸ್ ಬಳಸಿ ಭದ್ರತೆ ಮತ್ತು ಗುರುತಿನ ಚೀಟಿ ತಪಾಸಣೆಗಾಗಿ ಸಾಲಿನಲ್ಲಿ ನಿಂತಿದ್ದಾಗ CISF ಅವರನ್ನು ತಡೆದು ವಶಕ್ಕೆ ತೆಗೆದುಕೊಂಡಿತು. ಈ ವೇಳೆ ಮೂವರಲ್ಲಿ ಇಬ್ಬರು ಒಂದೇ ರೀತಿಯ ಸಂಖ್ಯೆಗಳನ್ನು ಹೊಂದಿರುವ ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದರು. ಆದರೆ ಅವರ ಸ್ವಂತ ಫೋಟೋಗಳನ್ನು ಹೊಂದಿರುವುದು ಬಯಲಾಗಿದೆ. ಇನ್ನೋರ್ವ ಸೋಯಾಬ್‌ನ ಗುರುತು ಪತ್ತೆ ಮಾಡಲಾಗುತ್ತಿದೆ.
ಬಂಧಿತ ಈ ಮೂವರನ್ನು ಡಿ ವೀ ಪ್ರಾಜೆಕ್ಟ್ ಲಿಮಿಟೆಡ್‌ನಿಂದ ನೇಮಕ ಮಾಡಲಾಗಿತ್ತು. ಅಲ್ಲದೇ ಇವರು ಕಳೆದ ಮೂರು ತಿಂಗಳಿಂದ ಸಂಸತ್ತಿನ ಸಂಕೀರ್ಣದ ಒಳಗೆ ಸಂಸದರ (Parliament) ವಿಶ್ರಾಂತಿ ಗೃಹ ನಿರ್ಮಾಣದಲ್ಲಿ ತೊಡಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಸದ್ಯ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 465 (ನಕಲಿ), 419 (ವ್ಯಕ್ತಿಯಿಂದ ವಂಚನೆ), 120 ಬಿ (ಕ್ರಿಮಿನಲ್ ಪಿತೂರಿ), 471 (ನಕಲಿ ದಾಖಲೆ ಬಳಕೆ) ಮತ್ತು 468 (ವಂಚನೆಯ ಉದ್ದೇಶಕ್ಕಾಗಿ ಫೋರ್ಜರಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
CRPF ಮತ್ತು ದೆಹಲಿ ಪೊಲೀಸ್ ತುಕಡಿಗಳನ್ನು ಬದಲಿಸಿ ಸಂಸತ್ತಿನ ಸಂಕೀರ್ಣದ ಸಂಪೂರ್ಣ ಭದ್ರತೆಯನ್ನು CISF ವಹಿಸಿಕೊಂಡ ಕೆಲವೇ ದಿನಗಳಲ್ಲಿ ಈ ಘಟನೆ ಸಂಭವಿಸಿದೆ. 2023 ರ ಡಿಸೆಂಬರ್‌ನಲ್ಲಿ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಎಂಬ ಇಬ್ಬರು ಲೋಕಸಭಾ (Lok Sabha) ಕಲಾಪ ನಡೆಯುವ ವೇಳೆ ಗ್ಯಾಲರಿಯಿಂದ ಜಿಗಿದು ಸ್ಮೋಕ್ ಬಾಂಬ್ ಸಿಡಿಸಿದ್ದರು. ಇತ್ತ ನೀಲಂ ಮತ್ತು ಅಮೋಲ್ ಎಂಬ ಇಬ್ಬರು ಪ್ರತಿಭಟನಾಕಾರರು ಸಂಸತ್ತಿನ ಹೊರಗೆ ಇದೇ ರೀತಿ ಪ್ರತಿಭಟನೆ ನಡೆಸಿದ್ದರು.