ನವದೆಹಲಿ: ಭಯೋತ್ಪಾದಕರು ಜಮ್ಮು-ಕಾಶ್ಮೀರದರಲ್ಲಿ ಭಾರೀ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಗುಪ್ತಚರ ದಳದ ಖಚಿತ ಮಾಹಿತಿ ಮೇರೆಗೆ 10 ಸಾವಿರ ಸೈನಿಕರನ್ನು ಕಾಶ್ಮೀರಕ್ಕೆ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಕೇಂದ್ರ ಸರ್ಕಾರ ರಾತ್ರೋರಾತ್ರಿ ದೇಶದ ವಿವಿಧ ಭಾಗಗಳಲ್ಲಿದ್ದ ಸುಮಾರು 10 ಸಾವಿರ ಸೈನಿಕರನ್ನು ಕಾಶ್ಮೀರಕ್ಕೆ ಸ್ಥಳಾಂತರಿಸಿತ್ತು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿ ಮರಳಿದ ನಂತರ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿತ್ತು. ಅಜಿತ್ ದೋವಲ್ ಅವರು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ನಂತರ ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿ, ಕಾಶ್ಮೀರದ ಪರಿಸ್ಥಿತಿ ನಿಭಾಯಿಸಲು ಹೆಚ್ಚುವರಿ ಸೈನಿಕರ ಅಗತ್ಯವಿದೆ ಎಂದು ತಿಳಿಸಿದ್ದರು.
Advertisement
Advertisement
ಈ ಹಿನ್ನೆಲೆ ಕೇಂದ್ರ ಸರ್ಕಾರ 10 ಸಾವಿರ ಸೈನಿಕರನ್ನು ರಾತ್ರೋ ರಾತ್ರಿ ಸ್ಥಳಾಂತರಿಸಿ ಆದೇಶ ಹೊರಡಿಸಿತ್ತು. ಇದೀಗ ಕೇಂದ್ರ ಸರ್ಕಾರದ ಈ ನಿರ್ಧಾರದ ಕುರಿತು ವಿವಿಧ ರೀತಿಯ ಚರ್ಚೆ ನಡೆಯುತ್ತಿದ್ದು, ಭಯೋತ್ಪಾದನಾ ದಾಳಿ ನಡೆಯಲಿದೆ ಎಂಬ ಗುಪ್ತಚರ ದಳದ ಖಚಿತ ಮಾಹಿತಿ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಶುಕ್ರವಾರ ತಡರಾತ್ರಿ 10 ಸಾವಿರ ಸೈನಿಕರನ್ನು ಸ್ಥಳಾಂತರಿಸಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡ ನಂತರ ಹಲವು ರೀತಿ ಚರ್ಚೆಗಳು ನಡೆದಿದ್ದವು. ಇದರ ಭಾಗವಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಆರ್ಟಿಕಲ್ 35ಎ ಅಡಿ ನೀಡಿರುವ ವಿಶೇಷ ಸ್ಥಾನಮಾನವನ್ನು ತೆರವುಗೋಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 10 ಸಾವಿರ ಸೈನಿಕರನ್ನು ಸ್ಥಳಾಂತರಿಸಿದೆ ಎನ್ನುವ ಚರ್ಚೆ ಕೇಳಿ ಬಂದಿತ್ತು.
Advertisement
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕಾಶ್ಮೀರ ಕಣಿವೆಯಲ್ಲಿನ ಆರ್ಟಿಕಲ್ 35ಎ ತೆರವುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಬೆಂಕಿಯೊಂದಿಗೆ ಸರಸವಾಡುತ್ತಿದೆ. ಒಂದು ವೇಳೆ ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದು ಮಾಡಿದರೆ ಈಗಾಗಲೇ ಸುರಿಯುತ್ತಿರುವ ಬೆಂಕಿಗೆ ಪೌಡರ್ ಹಾಕಿದಂತಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕಾಶ್ಮೀರದ ಕಣಿವೆಯಲ್ಲಿ ಭಯೋತ್ಪಾದನಾ ದಾಳಿ ನಡೆಸಲು ಭಾರೀ ಸಂಚು ರೂಪಿಸಲಾಗುತ್ತಿದೆ. ಹೀಗಾಗಿ ಭಯೋತ್ಪಾದನಾ ಚಟುವಟಿಕೆಗಳನ್ನು ಹತ್ತಿಕ್ಕಲು ಹೆಚ್ಚುವರಿಯಾಗಿ 10 ಸಾವಿರ ಸೈನಿಕರನ್ನು ಸ್ಥಳಾಂತರಿಸಲಾಗಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ಒಂದು ವರದಿ ಮಾಡಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಕಾಶ್ಮೀರ ಕಣಿವೆಯ ಎರಡು ದಿನಗಳ ಭೇಟಿಯಿಂದ ಹಿಂದಿರುಗಿದ ನಂತರ ಈ ನಿರ್ಧಾರ ಕೈಗೊಂಡಿದ್ದು, ಸೈನ್ಯವನ್ನು ಕಳುಹಿಸುವ ಕುರಿತು ನಿರ್ಧರಿಸಲಾಗಿದೆ. ದೋವಲ್ ಅವರು ಕಾಶ್ಮೀರ ಕಣಿವೆಗೆ ಭೇಟಿ ನೀಡಿದ ವೇಳೆ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿದ್ದು, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯ ಸ್ಥಿತಿಗತಿ ಕುರಿತು ವಿವರ ಪಡೆದಿದ್ದರು.
ಭಯೋತ್ಪಾದಕರ ದಾಳಿಗೆ ಪ್ರತಿದಾಳಿ ನಡೆಸಲು ಹಾಗೂ ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಸೇನಾ ಪಡೆಯನ್ನು ನಿಯೋಜಿಸಲಾಗುತ್ತಿದೆ ಎಂದು ಗೃಹ ಸಚಿವಾಲಯ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿತ್ತು. ಅಲ್ಲದೆ, ದೇಶದ ವಿವಿಧ ಭಾಗಗಳಲ್ಲಿರುವ ಸೈನಿಕರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಲಾಗುತ್ತಿದೆ ಎಂದು ಹೇಳಲಾಗಿತ್ತು.
ಈ ಕುರಿತು ಜಮ್ಮು ಮತ್ತು ಕಾಶ್ಮೀರದ ಡಿಜಿ ದಿಲ್ಬಾಗ್ ಸಿಂಗ್ ಅವರು ಸ್ಪಷ್ಟಪಡಿಸಿ, 10 ಸಾವಿರ ಅರೆ ಸೇನಾ ಪಡೆಯನ್ನು ಉತ್ತರ ಕಾಶ್ಮೀರ ಭಾಗಕ್ಕೆ ನಿಯೋಜನೆಗೊಳಿಸುವಂತೆ ಈಗಾಗಲೇ ಮನವಿ ಮಾಡಲಾಗಿತ್ತು ಎಂದು ತಿಳಿಸಿದ್ದರು.
ಉತ್ತರ ಕಾಶ್ಮೀರದಲ್ಲಿ ಸೈನಿಕರ ಕೊರತೆ ಇದ್ದು, ಹೀಗಾಗಿ ನಮಗೆ ಹೆಚ್ಚುವರಿ ಸೈನ್ಯದ ಅಗತ್ಯವಿದೆ. ಈ ಹಿಂದೆ 100 ಕಂಪನಿಗಳನ್ನು ಸಾಗಿಸಲಾಗಿದ್ದು, ಅದನ್ನೇ ನಾವು ಮರಳಿ ಕೇಳಿದ್ದೇವೆ ಎಂದು ದಿಲ್ಬಾಗ್ ಸಿಂಗ್ ತಿಳಿಸಿದ್ದರು. ಒಂದು ಕಂಪನಿ 100 ಸೈನಿಕರನ್ನು ಒಳಗೊಂಡಿರುತ್ತದೆ.
ಇತ್ತೀಚೆಗೆ ಅಮರನಾಥ ಯಾತ್ರೆಯ ಭದ್ರತೆಗಾಗಿ ಹೆಚ್ಚುವರಿಯಾಗಿ ಸುಮಾರು 40 ಸಾವಿರ ಕೇಂದ್ರ ಅರೆಸೈನಿಕ ಪಡೆಗಳನ್ನು ಕಳುಹಿಸಲಾಗಿದೆ. ಫೆ.24ರಂದು ಕೇಂದ್ರ ಅರೆಸೈನಿಕ ಪಡೆಯ ಸುಮಾರು 100 ಕಂಪನಿಗಳನ್ನು ಕಣಿವೆ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಗೆ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಸರ್ಕಾರ ತಿಳಿಸಿತ್ತು.
ಇದಾದ ನಂತರ ಜಮಾತ್-ಇ-ಇಸ್ಲಾಮಿ ಮೇಲೆ ನಿಷೇಧ ಹೇರಲಾಯಿತು. ಅಲ್ಲದೆ, ರಾಜ್ಯದ ನಾಯಕರು ಮತ್ತು ಬೆಂಬಲಿಗರ ಮೇಲೆ ಹೆಚ್ಚು ದಬ್ಬಾಳಿಕೆಗಳು ನಡೆದಿದ್ದವು ಎಂದು ದಿಲ್ಬಾಗ್ ಸಿಂಗ್ ಮಾಹಿತಿ ನೀಡಿದ್ದರು.