ಮಂಗಳೂರು: ವಿಮಾನ ನಿಲ್ದಾಣದ ಆವರಣದಲ್ಲಿ ಪತ್ತೆಯಾದ ಬಾಂಬ್ ನ್ನು ನಿಷ್ಕ್ರಿಯಗೊಳಿಸಲು ಅಧಿಕಾರಿಗಳು ಕೆಂಜಾರು ಮೈದಾನದಲ್ಲಿ ನಿರತರಾಗಿದ್ದಾರೆ. ಇತ್ತ ಮಂಗಳೂರಿನಿಂದ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಬೆದರಿಕೆ ಕರೆಯೊಂದು ಬಂದಿದೆ.
ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ತಡೆದು ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಮುಂಜಾಗ್ರತ ಕ್ರಮವಾಗಿ ವಿಮಾನದಲ್ಲಿದ್ದ ಎಲ್ಲ 126 ಪ್ರಯಾಣಿಕರನ್ನು ಕೆಳಗಿಳಿಸಿ ವಿಮಾನ ತಪಾಸಣೆಗೆ ಬಾಂಬ್ ಸ್ಕ್ವಾಡ್ ತಂಡ ಮುಂದಾಗಿದೆ. ವಿಮಾನ ಮಂಗಳೂರಿನಿಂದ ಹೈದರಾಬಾದ್ ನತ್ತ ತೆರಳಲು ಸಿದ್ಧಗೊಂಡಾಗ ಇಂಡಿಗೋ ವಿಮಾನಯಾನ ಸಂಸ್ಥೆಗೆ ಬೆದರಿಕೆ ಕರೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ಇಂದು ಬೆಳಗ್ಗೆ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಅನುಮಾನಾಸ್ಪದ ಲ್ಯಾಪ್‍ಟಾಪ್ ಬ್ಯಾಗ್ ಪತ್ತೆಯಾಗಿತ್ತು, ಬ್ಯಾಗ್ ಒಳಗಡೆ 10 ಕೆಜಿ ತೂಕವುಳ್ಳ ಸಜೀವ ಬಾಂಬ್ ಇತ್ತು. ಸಿಐಎಸ್‍ಎಫ್ ಸಿಬ್ಬಂದಿ ನಿಲ್ದಾಣದಲ್ಲಿಯ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ ಪತ್ತೆಯಾದ ಬ್ಯಾಗ್ ನ್ನು ಬಾಂಬ್ ನಿಷ್ಕ್ರಿಯ ವಾಹನದಲ್ಲಿ ಇರಿಸಿದ್ದರು. ಕೆಲ ಸಮಯದ ಬಳಿಕ ಬಾಂಬ್ ನ್ನು ಕೆಂಜಾರು ಮೈದಾನದಲ್ಲಿ ನಿಷ್ಕ್ರಿಯಗೊಳಿಸಲು ಮುಂದಾಗಿದ್ದಾರೆ.