ನವದೆಹಲಿ: ತನ್ನ ಆಸ್ತಿಯನ್ನು ವಶಪಡಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಂದ ಬೆದರಿಕೆ ಬರುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಇಂದು (ಮಾ.20) ಅರ್ಜಿಯ ವಿಚಾರಣೆ ನಡೆಸಿತು. ನ್ಯಾಯಾಲಯದಲ್ಲಿ ರಾಜಕೀಯ ಹೋರಾಟ ಮಾಡಬೇಡಿ, ಅಗತ್ಯವಿದ್ದರೆ ಅರ್ಜಿದಾರರು ಕರ್ನಾಟಕ ಹೈಕೋರ್ಟ್ಗೆ ಮೊರೆ ಹೋಗಬಹುದು ಎಂದು ಸಲಹೆ ನೀಡಿದೆ. ಇದನ್ನೂ ಓದಿ: ಬೈಕ್, ಪಿಕಪ್ ವ್ಯಾನ್‌ಗೆ ಸರ್ಕಾರಿ ಬಸ್ ಡಿಕ್ಕಿ – ಗರ್ಭಿಣಿ, ಮಗು ಸೇರಿ ಎಂಟು ಮಂದಿ ದುರ್ಮರಣ
ಮೈಸೂರು ಮೂಲದ ಸುಷ್ಮಾ ಎಸ್. ಆರಾಧ್ಯ ಎಂಬುವರು ತಮ್ಮ ಕರ್ನಾಟಕದ ಆಸ್ತಿಯ ಮೇಲೆ ಬೆದರಿಕೆಗಳು ಬರುತ್ತಿವೆ ಎಂದು ಆರೋಪಿಸಿದ್ದರು. ನನಗೆ ಬೆದರಿಕೆ ಬರುತ್ತಿದೆ. ಕರ್ನಾಟಕಕ್ಕೆ ಹೋಗೋಕೆ ಆಗುತ್ತಿಲ್ಲ. ನನ್ನ ಭದ್ರತೆಗೆ ಧಕ್ಕೆ ತಂದು, ದೆಹಲಿಯಲ್ಲಿ ಇರುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ನಾನು ನನ್ನ ಸ್ವಂತ ಮನೆಯಲ್ಲಿರಲು ಬಯಸುತ್ತೇನೆ. ಆದರೆ ಸಾಧ್ಯವಾಗುತ್ತಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಜನವರಿ ತಿಂಗಳಲ್ಲಿ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ. ಗೂಂಡಾಗಳು ನುಗ್ಗಿ ಆಸ್ತಿಯನ್ನು ಹಾನಿಗೊಳಿಸಿ, ಲೂಟಿ ಮಾಡಿ ವಶಪಡಿಸಿಕೊಳ್ಳಲು ಯತ್ನಿಸಿದ್ದಾರೆ. ಹಲವು ಪೊಲೀಸ್ ದೂರುಗಳನ್ನು ನೀಡಿ, ನ್ಯಾಯಾಲಯದಿಂದ ಆದೇಶಗಳನ್ನು ಪಡೆದರೂ ಕೂಡ ಬೆದರಿಕೆಗಳು ಮುಂದುವರಿದಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಜೊತೆಗೆ ಈ ಎಲ್ಲಾ ಘಟನೆಗಳು ಸಿಎಂ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ನಡೆಯುತ್ತಿವೆ ಎಂದು ಆರೋಪಿಸಲಾಗಿತ್ತು.
ಸದ್ಯ ಸುಪ್ರೀಂಕೋರ್ಟ್ ಈ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳದೆ, ರಾಜ್ಯಮಟ್ಟದ ನ್ಯಾಯಾಲಯಕ್ಕೆ ಮೊರೆ ಹೋಗುವಂತೆ ಸೂಚಿಸಿದೆ.ಇದನ್ನೂ ಓದಿ: ಅಮೆರಿಕದ ಫೈಟರ್ ಜೆಟ್ ಲ್ಯಾಂಡಿಂಗ್ ನಿರಾಕರಿಸಿ ನಮ್ಮದು ತಟಸ್ಥ ದೇಶ ಎಂದ ಶ್ರೀಲಂಕಾ

