ವಿಜಯಪುರ: ಜಿಲ್ಲೆಯಲ್ಲಿ (Vijayapur) 44 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು ಜನ, ಜಾನುವಾರುಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇನ್ನೂ ಜಿಲ್ಲೆಯ ಮಧಬಾವಿ ತಾಂಡಾದಲ್ಲಿ ರಣಬಿಸಿಲಿಗೆ ಇಂಜಿನಿಯರ್ ಒಬ್ಬರು ಸಾಕಿದ್ದ ಸಾವಿರಾರು ಮೀನುಗಳು ಸಾವನ್ನಪ್ಪಿದ್ದು, ಲಕ್ಷಾಂತರ ರೂ.ಗಳ ನಷ್ಟದಿಂದ ರೈತರು ಕಂಗಾಲಾಗಿದ್ದಾರೆ.
ಬೆಂಗಳೂರಿನ (Bengaluru) ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿರುವ ವಿಜಯಕುಮಾರ್ ಎಂಬವರು ತಾಂಡದಲ್ಲಿ ಮೀನು ಸಾಕಣೆ ಮಾಡಿದ್ದರು. ಸುಮಾರು 20 ಲಕ್ಷ ರೂ.ಗೂ ಅಧಿಕ ಹಣ ಖರ್ಚು ಮಾಡಿ 17 ಸಾವಿರ ಸ್ನೇಕ್ ಹೆಡ್ ಮುರೆಲ್ ತಳಿಯ ಮೀನನ್ನು (Snakehead murrel Fish) ಸಾಕಿದ್ದರು. ಇನ್ನೇನೂ ಎರಡು ದಿನಗಳಲ್ಲಿ ಮೀನುಗಳು 30-40 ಲಕ್ಷ ರೂ.ಗಳಿಗೆ ಹೈದ್ರಾಬಾದ್‍ಗೆ ಮಾರಾಟ ಆಗಬೇಕಿತ್ತು. ಅಷ್ಟರಲ್ಲಿ ಮೀನುಗಳ ಮಾರಣ ಹೋಮವೇ ನಡೆದಿದೆ.
ಈ ಮೀನುಗಳಿಗೆ ಪ್ರತಿ ತಿಂಗಳು 2 ಲಕ್ಷ ರೂ.ಗಳಷ್ಟು ಆಹಾರ ಹಾಕಿ ಬೆಳೆಸಲಾಗಿತ್ತು. ಮಾರುಕಟ್ಟೆಯಲ್ಲಿ ಕೆಜಿಗೆ 700 ರಿಂದ 800 ರೂ. ಬೆಲೆ ಬಾಳುವ ಮೀನುಗಳು ಇನ್ನೇನು ಕೊನೆಯ ಕ್ಷಣದಲ್ಲಿ ಸಾವನ್ನಪ್ಪಿವೆ ಎಂದು ರೈತ (Farmer) ವಿಜಯಕುಮಾರ್ ಹಾಗೂ ಮಿತ್ರರು ಕಣ್ಣಿರು ಹಾಕುತ್ತಿದ್ದಾರೆ.
ಕಳೆದ ವರ್ಷ ಮೀನು ಕೃಷಿ ಮಾಡಿ ವಿಜಯಕುಮಾರ್ ಯಶಸ್ವಿಯಾಗಿದ್ದರು. ಈ ಹಿನ್ನೆಲೆ ಮೀನುಗಾರಿಕೆ ಇಲಾಖೆಯಿಂದ (Department of Fisheries) ಅವರಿಗೆ ಸನ್ಮಾನಿಸಲಾಗಿತ್ತು. ಈ ಬಾರಿಯೂ ಒಳ್ಳೆಯ ಇಳುವರಿ ಬಂದಿತ್ತು. ಆದರೆ ಬಿಸಿಲಿನ ತಾಪಕ್ಕೆ ಮೀನುಗಳು ಸಾವನ್ನಪ್ಪಿದ್ದು, ಸರ್ಕಾರದ ಸಹಾಯಕ್ಕೆ ಅವರು ಕೈಚಾಚಿದ್ದಾರೆ.
ಪ್ರತಿನಿತ್ಯ ವಿಜಯಪುರದಲ್ಲಿ ಉಷ್ಣಾಂಶ ದಾಖಲೆ ಪ್ರಮಾಣದಲ್ಲಿ ಏರುತ್ತಿದ್ದು, 40 ರಿಂದ 44 ಡಿಗ್ರಿ ವರೆಗೂ ತಾಪಮಾನ ದಾಖಲಾಗಿತ್ತಿದೆ. ಇದರಿಂದ ಜಿಲ್ಲೆಯ ಜನರ ನಿದ್ದೆ ಹದೆಗೆಟ್ಟು ಹೋಗಿದೆ. ಜನರ ಆರೋಗ್ಯದ ಮೇಲೂ ನಾನಾ ದುಷ್ಪರಿಣಾಮಗಳು ಬೀರುತ್ತಿವೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.