ಹಾಸನ/ಮೈಸೂರು: ಹಾಸನಾಂಬೆ ಹಾಗೂ ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಿಯ ದರ್ಶನಕ್ಕಾಗಿ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನಕ್ಕೆ ಇಂದು ಅಂತಿಮ ದಿನವಾಗಿದ್ದು ನಾಳೆ ಮಧ್ಯಾಹ್ನ 12 ಗಂಟೆಗೆ ಹಾಸನಾಂಬೆ ದೇಗುಲದ ಗರ್ಭಗುಡಿಯನ್ನು ಮುಚ್ಚಲಾಗುವುದು.
Advertisement
ಇಂದು ಬೆಳಗ್ಗೆ 5 ರಿಂದ ಸಂಜೆ 5 ಮತ್ತು ರಾತ್ರಿ 9 ರಿಂದ ಶನಿವಾರ ಬೆಳಗ್ಗೆ 6 ಗಂಟೆವರೆಗೆ ಭಕ್ತರು ದೇವಿಯ ದರ್ಶನ ಪಡೆಯಬಹುದು. ಶನಿವಾರ ಮಧ್ಯಾಹ್ನ ವಿಶ್ವರೂಪ ದರ್ಶನ ನಂತರ ಗರ್ಭಗುಡಿಯ ಬಾಗಿಲು ಹಾಕಲಾಗುವುದು.
Advertisement
ದೇವಿ ದರ್ಶನಕ್ಕೆ ಇಂದು ಕಡೇ ದಿನವಾಗಿರುವ ಹಿನ್ನೆಲೆಯಲ್ಲಿ ಜನಸಾಗರವೇ ದೇಗುಲಕ್ಕೆ ಹರಿದು ಬಂದಿದೆ. ಭಕ್ತರ ಸಾಮಾನ್ಯ ದರ್ಶನದ ಸಾಲು 2 ಕಿಲೋ ಮೀಟರ್ ಗೂ ಹೆಚ್ಚಿದೆ. ದೇವಿಯ ವಿಶೇಷ ದರ್ಶನದ 300 ರೂ. ಪಾಸ್ ಹಾಗೂ 1000 ರೂ. ಪಾಸ್ ಗೂ ಭಾರೀ ಬೇಡಿಕೆ ಇದೆ. ದೇವಿ ದರ್ಶನದ ಕೊನೆಯ ದಿನವಾದ ಇಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಜೆಡಿಎಸ್ ಶಾಸಕ ಶರವಣ ದೇಗುಲಕ್ಕೆ ಭೇಟಿ ನೀಡಿದರು.
Advertisement
ಅತ್ತ ಮೈಸೂರಿನಲ್ಲೂ ಚಾಮುಂಡೇಶ್ವರಿ ದರ್ಶನಕ್ಕೆ ಚಾಮುಂಡಿ ಬೆಟ್ಟಕ್ಕೆ ಜನಸಾಗರವೇ ಹರಿದು ಬಂದಿದೆ. ದೀಪಾವಳಿ ಹಬ್ಬದ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಆಷಾಢ ಶುಕ್ರವಾರವನ್ನೂ ಮೀರಿಸಿದ ಭಕ್ತ ಸಾಗರವೇ ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಿದೆ. ಸುಮಾರು 3 ಕಿಲೋ ಮೀಟರ್ ಗೂ ಉದ್ದಕ್ಕೆ ವಾಹನಗಳ ಸಾಲು ಜಮಾಯಿಸಿದ್ದು ವಾಹನ ದಟ್ಟಣೆಯನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಹಲವು ಗಂಟೆಗಳ ಕಾಲ ಸರದಿ ಸಾಲಲ್ಲಿ ನಿಂತು ಭಕ್ತರು ದೇವಿ ದರ್ಶನ ಪಡೆಯುತ್ತಿದ್ದಾರೆ.
Advertisement