ದಾವಣಗೆರೆ: ಭಾರಿ ಮಳೆಗೆ ದಾವಣಗೆರೆಯಲ್ಲಿ ಜನರ ಜೀವನ ಅಸ್ಥವ್ಯಸ್ತವಾಗಿದೆ. ಸಾವಿರಾರು ಮನೆಗಳು ನೆಲಸಮವಾಗಿದ್ದು, ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ.
ಮಳೆ ನಿರಾಶ್ರಿತರು ಮಳೆ ಚಳಿ ಎನ್ನದೇ ನಡುರಸ್ತೆಯಲ್ಲಿ ಮಲಗಿ ಕಾಲ ಕಳೆಯುತ್ತಿದ್ದಾರೆ. ಇನ್ನು ಅನ್ನ ನೀರು ಕೂಡ ಸರಿಯಾಗಿ ಸಿಗ್ತಿಲ್ಲ. ಚಿಕ್ಕ ಮಕ್ಕಳು, ಬಾಣಂತಿಯರು ಸರಿಯಾಗಿ ಊಟವಿಲ್ಲದೆ ಒದ್ದಾಡುವ ಪರಿಸ್ಥಿತಿ ಬಂದೊದಗಿದೆ. ಊಟವನ್ನೂ ಸರಿಯಾಗಿ ಕೊಡ್ತಿಲ್ಲ. ಅರೆಬರೆ ಬೆಂದ ಅನ್ನಕ್ಕೆ ಸಾಂಬರ್ ಕಲಸಿ ಬೇಕಾಬಿಟ್ಟಿ ವಿತರಣೆ ಮಾಡಿ ಹೋಗುತ್ತಿದ್ದಾರೆ.
ಸಂತ್ರಸ್ತರ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ. ನಾಮಕಾವಸ್ತೆಗೆ ಡಿಸಿ ಮತ್ತು ಇತರೆ ಅಧಿಕಾರಿಗಳು ಬಂದು ಹೋಗಿದ್ದು ಬಿಟ್ರೆ ರಾಜಕಾರಣಿಗಳು ಇತ್ತ ತಲೆಯನ್ನೇ ಹಾಕಿಲ್ಲ. ಇಷ್ಟೆಲ್ಲ ಸಮಸ್ಯೆ ಇದ್ರೂ ಜಿಲ್ಲಾ ಉಸ್ತುವರಿ ಸಚಿವ ಎಸ್‍ಎಸ್ ಮಲ್ಲಿಕಾರ್ಜುನ್, ಸಂಸದ ಜಿಎಂ ಸಿದ್ದೇಶ್ವರ್, ಮಾಜಿ ಮಂತ್ರಿ ಶಾಮನೂರು ಶಿವಶಂಕರಪ್ಪ ಸಂತ್ರಸ್ತರ ಸಂಕಷ್ಟ ಆಲಿಸುವ ಕೆಲಸ ಮಾಡಿಲ್ಲ. ಇದು ಜನಾಕ್ರೋಶಕ್ಕೆ ಕಾರಣವಾಗಿದೆ.