ಕಾಶ್ಮೀರದಲ್ಲಿ ಬಂದ್ ನಡುವೆಯೂ ಉಗ್ರ ಲಷ್ಕರಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾದ್ರು ಸಾವಿರಾರು ಜನ

Public TV
1 Min Read
Bashir Lashkari funeral

 

ಶ್ರೀನಗರ: ಗಣ್ಯವ್ಯಕ್ತಿಗಳು ನಿಧನರಾದ್ರೆ ಅವರ ಅಂತ್ಯಕ್ರಿಯೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಭಾಗವಹಿಸೋದು ಸಾಮಾನ್ಯ. ಆದ್ರೆ ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ಶನಿವಾರದಂದು ಭದ್ರತಾ ಪಡೆಯಿಂದ ಹತ್ಯೆಗೀಡಾದ ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರ ಬಷೀರ್ ಲಷ್ಕರಿ ಅಂತ್ಯಕ್ರಿಯೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದು, ಇದರ ಫೋಟೋಗಳು ಆನ್‍ಲೈನ್‍ನಲ್ಲಿ ಹರಿದಾಡ್ತಿವೆ. ಕಾಶ್ಮೀರದಲ್ಲಿ ಬಂದ್ ನಡುವೆಯೂ ಇಷ್ಟೊಂದು ಸಂಖ್ಯೆಯಲ್ಲಿ ಉಗ್ರನ ಅಂತ್ಯಕ್ರಿಯೆಯಲ್ಲಿ ಜನ ಭಾಗವಹಿಸಿದ್ದಾರೆ.

Bashir Lashkari 2

ಶನಿವಾರದಂದು ಅನಂತ್‍ನಾಗ್ ಜಿಲ್ಲೆಯ ಬ್ರಿಂಟಿ ಡಯಲ್‍ಗಾಮ್ ಪ್ರದೇಶದಲ್ಲಿ ಮನೆಯೊಂದರಲ್ಲಿ ಅಡಗಿದ್ದ ಉಗ್ರ ಲಷ್ಕರಿ ಹಾಗೂ ಆತನ ಸಹಚರನನ್ನು ಭದ್ರತಾ ಪಡೆ ಹೊಡೆದುರುಳಿಸಿತ್ತು. ಯೋಧರ ಕಾರ್ಯಾಚರಣೆ ವೇಳೆ ಓರ್ವ ಮಹಿಳೆ ಹಾಗೂ ಯುವಕ ಸೇರಿ ಇಬ್ಬರು ನಾಗರೀಕರು ಸಾವನ್ನಪ್ಪಿದ್ದರು.

ಲಷ್ಕರಿಯ ಅಂತ್ಯಕ್ರಿಯೆ ಭಾನುವಾರದಂದು ಅನಂತ್‍ನಾಗ್‍ನ ಕೋಕರ್‍ನಾಗ್‍ನಲ್ಲಿರುವ ಸೋಫ್ ಶಾಲಿ ಗ್ರಾಮದಲ್ಲಿ ನಡೆದಿದ್ದು, ಸಾವಿರಾರು ಜನ ಭಾಗವಹಿಸಿದ್ದರು. ಲಷ್ಕರಿಯ ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯುವ ವೇಳೆ ಭಾರತದ ಆಡಳಿತದಿಂದ ಸ್ವಾತಂತ್ರ್ಯ ಬೇಕೆಂದು ಘೋಷಣೆ ಕೂಗಿದ್ರು. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಶನಿವಾರ ರಾತ್ರಿ ಅಂತಿಮ ದರ್ಶನ ನಡೆದಿದ್ದು, ಈ ವೇಳೆ ಕೆಲವರು ಸ್ಥಳಕ್ಕೆ ಬಂದು ಗನ್ ಸೆಲ್ಯೂಟ್ ಅರ್ಪಿಸಿದ್ರು ಎಂದು ವರದಿಯಾಗಿದೆ.

Bashir

ಈ ನಡುವೆ ಪ್ರತ್ಯೇಕತಾವಾದಿ ಮುಖಂಡರಾದ ಸೈಯದ್ ಅಲಿ, ಗಿಲಾನಿ ಹಾಗೂ ಮಿರ್ವೈಸ್ ಉಮರ್ ಫರೂಕ್ ಹಾಗೂ ಯಾಸಿನ್ ಮಲಿಕ್ ನೀಡಿದ್ದ ಕರೆಯ ಹಿನ್ನೆಲೆಯಲ್ಲಿ ಶ್ರೀನಗರ ಹಾಗೂ ಇತರೆ ಜಿಲ್ಲೆಗಳಲ್ಲಿ ಅಂಗಡಿಗಳು ಹಾಗೂ ಕಚೇರಿಗಳನ್ನು ಮುಚ್ಚಲಾಗಿತ್ತು.

Bashir Lashkari 3

ಶ್ರೀನಗರ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಅಧಿಕಾರಿಗಳು ಕೆಲವು ಪ್ರಮುಖ ನಗರಗಳಲ್ಲಿ ನಿರ್ಬಂಧ ಹೇರಿದ್ದರು. ನೌಹಟ್ಟಾ, ಎಮ್‍ಆರ್ ಗುಂಜ್, ರೈನಾವರಿ, ಖನ್‍ಯಾರ್, ಸಫಕ್ದಲ್, ಮೈಸುಮಾ ಹಾಗೂ ಕ್ರಾಲ್‍ಕುದ್‍ನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಉತ್ತರ ಕಾಶ್ಮೀರದ ಬರಾಮುಲ್ಲಾದಿಂದ ಶ್ರೀನಗರ ನಡುವಿನ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಹಾಗೇ ಕೇಂದ್ರ ಕಾಶ್ಮೀರದಿಂದ ದಕ್ಷಿಣ ಕಾಶ್ಮೀರ ನಡುವಿನ ರೈಲುಗಳ ಸಂಚಾರವನ್ನೂ ಕೂಡ ಸ್ಥಗಿತಗೊಳಿಸಲಾಗಿದೆ.

Bashir Lashkari

Share This Article
Leave a Comment

Leave a Reply

Your email address will not be published. Required fields are marked *