ಮೈಸೂರು: ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆ ಹಿನ್ನೆಲೆಯಲ್ಲಿ ಮೈಸೂರು ಸೇರಿದಂತೆ ಹಲವೆಡೆ ಜೆಡಿಎಸ್ ಮುಖಂಡರು ಬಂಡಾಯ ಎದ್ದಿರುವ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಫುಲ್ ಗರಂ ಆಗಿದ್ದಾರೆ.
ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಎಲ್ಲಿ ಬೇಕಾದ್ರೂ ಹೋಗಲು ಮುಕ್ತ ಅವಕಾಶವಿದೆ. ಬರೋರು ಬರಬಹುದು, ಹೋಗೋರು ಹೋಗಬಹುದು, ನಾನ್ಯಾರನ್ನು ಹಿಡ್ಕೊಂಡಿಲ್ಲ. ಯಾವುದೇ ರೀತಿಯ ಟಿಕೆಟ್ ಗೊಂದಲವಿಲ್ಲ ಅಂತ ಖಡಕ್ ಆಗಿ ನುಡಿದಿದ್ದಾರೆ.
Advertisement
ಚುನಾವಣೆಯಲ್ಲಿ ಗೆಲ್ಲುವಂತಹ ದೃಷ್ಟಿಯಿಂದಲೇ ತೀರ್ಮಾನಗಳನ್ನು ಮಾಡಿದ್ದೇನೆ. ಇಲ್ಲಿ ಯಾವುದೇ ವ್ಯಾಮೋಹ ಅಥವಾ ಇನ್ಯಾವುದೋ ಕಾರಣಕ್ಕೆ ಟಿಕೆಟ್ ಕೊಡುವ ಪ್ರಶ್ನೆಯಿಲ್ಲ. ಈ ಬಾರಿ ಜನತಾ ದಳ 113 ಸ್ಥಾನ ಗೆಲ್ಲಬೇಕೆಂಬ ಹಿನ್ನೆಲೆಯಲ್ಲಿ ಇಂದು ಈ ತೀರ್ಮಾನ ತೆಗೆದುಕೊಂಡಿದ್ದೇವೆ. ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅವರಿಗೂ ನಾನು ಹೇಳುವುದಿಷ್ಟೆ, ಹಿಂದುಗಡೆ ಒಂದು, ಮುಂದುಗಡೆ ಒಂದು ಮಾತಾನಾಡುವುದನ್ನು ನಿಲ್ಲಿಸಿ. ಈ ಪಕ್ಷದಿಂದ ಅವರ ಕುಟುಂಬಕ್ಕೆ ಸಿಕ್ಕಿರುವ ಲಾಭವೇನು? ಹಾಗೂ ಅವರಿಂದ ಈ ಪಕ್ಷಕ್ಕೆ ಸಿಕ್ಕಿರೋ ಲಾಭವೇನು? ಎಂಬುದನ್ನು ಅವರು ಒಬ್ಬರೇ ಕೂತು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದರು.
Advertisement
Advertisement
ಈ ಪಕ್ಷ ಇರೋದು ಯಾವುದೇ ಒಂದು ಕುಟುಂಬಕ್ಕಲ್ಲ. ಇದು ದೇವೇಗೌಡ ಕುಟುಂಬಕ್ಕೂ ಸೀಮಿತವಲ್ಲ. ಲಕ್ಷಾಂತರ ಕಾರ್ಯಕರ್ತರು ಕಟ್ಟಿರುವಂತಹ ಪಕ್ಷ ಇದಾಗಿದೆ. ಎಂಎಲ್‍ಸಿ ಚುನಾವಣೆಯಲ್ಲಿ ಎರಡನೇ ಬಾರಿ ಗೆದ್ದು ವೈಯಕ್ತಿಕ ವರ್ಚಸ್ಸಿನಿಂದ ಗೆದ್ದಿದ್ದೀನಿ, ಜೆಡಿಎಸ್ ನಿಂದ ಗೆದ್ದಿಲ್ಲ ಅಂತ ಸಂದೇಶ್ ನಾಗರಾಜ್ ಹೇಳಿಕೆ ಕೊಟ್ಟಿದ್ರು. ಇಂತಹವರಿಗೆ ಏನಾದ್ರೂ ಅಲ್ಪಸ್ವಲ್ಪ ಪಾಪಪ್ರಜ್ಞೆ ಇದೆಯಾ? ಇಂತವರಿಂದ ಪಕ್ಷ ಕಟ್ಟಿದ್ದೀನಿ ಅಂತ ತಿಳ್ಕೊಂಡಿದ್ದೀನಾ? ಹೀಗಾಗಿ ಹೇಳುತ್ತಿದ್ದೇನೆ ಇರೋರು ಇರಬಹುದು ಹೋಗೋರು ಹೋಗ್ಬೋದು ಅಂತ. ಮೊದಲು ಅವರು ಇಂತಹ ಸಣ್ಣತನಗಳನ್ನು ಬಿಡಬೇಕಾಗುತ್ತದೆ ಅಂತ ಬಹಳ ವಿನಮ್ರತೆಯಿಂದ ಹೇಳಲು ಬಯಸುತ್ತೇನೆ ಎಂದು ಹೆಚ್‍ಡಿಕೆ ಹೇಳಿದ್ರು.
Advertisement
ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಪರ್ಸೆಂಟೇಜ್ ಬಗ್ಗೆ ಮಾತಾಡುತ್ತಿವೆ. ಇಬ್ಬರು ಪರ್ಸೆಂಟೇಜ್‍ನಲ್ಲಿ ನಿಸ್ಸೀಮರು. ನನ್ನ ಆಡಳಿತದಲ್ಲಿ ಎಷ್ಟು ಪರ್ಸೆಂಟೇಜ್ ಇತ್ತು, ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದಲ್ಲಿ ಎಷ್ಟು ಪರ್ಸೆಂಟೆಜ್ ಇದೆ ಎಂದು ಎಲ್ಲಾ ಗುತ್ತಿಗೆದಾರರಿಗೆ ಗೊತ್ತಿದೆ. ಸಚಿವ ರಮೇಶ್ ಕುಮಾರ್ ಸರ್ಕಾರದ ಭ್ರಷ್ಟಾಚಾರವನ್ನು ವಿಧಾನಸಭೆಯಲ್ಲಿ ಸಮರ್ಥಿಸಿಕೊಳ್ಳುತ್ತಾರೆ. ಇಂತಹ ಸರ್ಕಾರ ಬೇಕಾ? ಪರ್ಸೆಂಟೇಜ್ ರಹಿತ ಸರ್ಕಾರ ಬೇಕಾ? ಜನ ತೀರ್ಮಾನ ಮಾಡಲಿ ಎಂದು ಅವರು ಹೇಳಿದ್ರು.
ಬಿಜೆಪಿ ವಿರುದ್ಧ ಕಿಡಿ: ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಬಿಜೆಪಿ ಪಾದಯಾತ್ರೆ ವಿಚಾರದ ಸಂಬಂಧ ಪ್ರತಿಕ್ರಿಯಿಸಿದ ಅವರು, ಮೊದಲು ಬೆಂಗಳೂರನ್ನು ಹಾಳು ಮಾಡಿದ್ದು ಬಿಜೆಪಿಯವರು. ನಂತರ ಅದಕ್ಕೆ ಸಿದ್ದರಾಮಯ್ಯ ಕೊಡುಗೆ ಕೊಟ್ಟರು. 5 ವರ್ಷದಲ್ಲಿ ಬೆಂಗಳೂರು ಅಭಿವೃದ್ಧಿಗೆ ಏನನ್ನು ಕೊಟ್ಟಿಲ್ಲ. ಬೆಂಗಳೂರು ಮತ್ತು ಮೈಸೂರು ಏನಾದರು ಅಭಿವೃದ್ಧಿಯಾಗಿದೆ ಅಂದರೆ ಅದು ನನ್ನಿಂದ. ಅಭಿವೃದ್ಧಿ ಹೆಸರಿನಲ್ಲಿ ನಿಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದೀರಿ ಅಂತ ಕಿಡಿ ಕಾರಿದ್ರು.
ಕಾಂಗ್ರೆಸ್ ಜೊತೆ ಮೈತ್ರಿಯಿಲ್ಲ: ರಾಜ್ಯಸಭಾ ಚುನಾವಣೆ ಕುರಿತು ಮಾತನಾಡಿ, ಕಾಂಗ್ರೆಸ್ ಜೊತೆ ನಾನು ಮೈತ್ರಿ ಮಾಡಿಕೊಳ್ಳುತ್ತಿಲ್ಲ. ಇರುವ ವಾಸ್ತವ ಸಂಖ್ಯೆಗಳ ಬಗ್ಗೆ ಮಾತಾಡಿದ್ದೀನಿ. ಮುಂದೆ ಅಧಿಕಾರ ಬೇಕಾದರೆ, ಇವತ್ತಿನ ಹಗರಣ ಮುಚ್ಚಿಕೊಳ್ಳಲು ಜೆಡಿಎಸ್ ಕಾಲು ಹಿಡಿಯಬೇಕಾಗುತ್ತದೆ. ಎಲ್ಲರೂ ಇದನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಮೈತ್ರಿ ಸರ್ಕಾರಕ್ಕೆ ಹೋರಾಡುತ್ತಿಲ್ಲ. ಬಹುಮತದ ಸರ್ಕಾರಕ್ಕೆ ಹೋರಾಡುತ್ತಿದ್ದೇನೆ. ಓವೈಸಿ ಪಕ್ಷದ ಜೊತೆ ಮೈತ್ರಿಯ ಬಗ್ಗೆ ಯಾವುದೇ ಮಾತುಕತೆ ನಡೆಸಿಲ್ಲ. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಯಾರ ಜೊತೆಗೆ ಬೇಕಾದರೂ ಮಾತುಕತೆ ನಡೆಸುತ್ತೇವೆ ಅಂತ ಅವರು ಹೇಳಿದ್ರು.