ಚಿಕ್ಕಮಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಆದಾಯ ತೆರಿಗೆ ಇಲಾಖೆ ದಾಳಿಗೆ ಕೇಂದ್ರ ಸರ್ಕಾರವೇ ಕಾರಣ ಎಂಬ ಕಾಂಗ್ರೆಸ್ ನಾಯಕರುಗಳ ಹೇಳಿಕೆಗೆ ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ಕೇಂದ್ರ ಸರ್ಕಾರವು ಕೇವಲ ಕಾಂಗ್ರೆಸ್ ಮುಖಂಡರ ಮನೆಗೆ ಮಾತ್ರ ಐಟಿ ದಾಳಿ ನಡೆಸುತ್ತಿದೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರಿ ಸಂಸ್ಥೆಗಳು ಅವ್ಯವಹಾರಗಳ ಹಿನ್ನೆಲೆಯಲ್ಲಿ ದಾಳಿ ನಡೆಸುತ್ತಿವೆ. ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರ ಇಲ್ಲ. ಆರೋಪಗಳಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಮುಖಂಡರುಗಳು ಕೇಂದ್ರ ಸರ್ಕಾರದ ವಿರುದ್ಧ ಗೂಬೆ ಕೂರಿಸುತ್ತಿದ್ದಾರೆ.
ಅವ್ಯವಹಾರ ಮಾಡಿದ್ದರಿಂದ ನಾಯಕರುಗಳಿಗೆ ಭಯ ಕಾಡುತ್ತಿದೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಯಾರು ನ್ಯಾಯಯುತವಾಗಿರುತ್ತಾರೆ ಅವರು ಹೆದರಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ತಪ್ಪು ಮಾಡಿದವರಿಗೆ ಭಯ ಇದ್ದೇ ಇರುತ್ತದೆ. ಯಾರು ತಪ್ಪು ಮಾಡಿರುತ್ತಾರೋ ಅವರು ಖಂಡಿತವಾಗಿಯೂ ಶಿಕ್ಷೆ ಅನುಭವಿಸುತ್ತಾರೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ತಿರುಗೇಟು ನೀಡಿದರು.
ದೇಶದಲ್ಲಿ ಆದಾಯ ತೆರಿಗೆ ದಾಳಿಯು ಸುಮಾರು 70 ವರ್ಷಗಳಿಂದ ದಾಳಿ ನಡಸುತ್ತಿದೆ. ಇದೇನೂ ಮೊದಲೇನಲ್ಲ ಕಾಂಗ್ರೆಸ್ ಸರ್ಕಾರದ 50 ವರ್ಷಗಳ ಅಧಿಕಾರ ಅವಧಿಯಲ್ಲಿ ನಡೆದ ಐಟಿ ದಾಳಿಗಳು ರಾಜಕೀಯ ಪ್ರೇರಿತವೇ ಎಂದು ಈ ವೇಳೆ ಪ್ರಶ್ನಿಸಿದರು.
ನನ್ನ ಬಳಿ ಹಲವು ಡೈರಿ ಇದೆ ಅಂತ ಡಿಕೆಶಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈವಾಗ ನಿಮ್ಮದೇ ಸರ್ಕಾರ ಹಾಗೂ ನಿಮ್ಮದೇ ಮುಖ್ಯಮಂತ್ರಿಗಳಿದ್ದಾರೆ. ಯಾವುದೇ ನಿರ್ಧಾರ ಕೈಗೊಳ್ಳುವ ಅಧಿಕಾರ ನಿಮಗೆ ಇದೆ. ನಿಮ್ಮ ಬಳಿ ಯಾರದ್ದು ಬೇಕಾದರೂ ಡೈರಿ ಇರಲಿ, ಇದ್ದರೆ ಅದರಲ್ಲಿರುವವರ ವಿರುದ್ಧ ತನಿಖೆ ಕೈಗೊಳ್ಳಿ ಎಂದು ಖಾರವಾಗಿ ಉತ್ತರಿಸಿದ್ದಾರೆ.