ಶ್ರೀನಗರ: ಮಹಾತ್ಮ ಗಾಂಧೀಜಿ ಅವರನ್ನು ಕೊಲೆ ಮಾಡಿದವರು ದೆಹಲಿಯಲ್ಲಿ ಕುಳಿತು ಸರ್ಕಾರ ನಡೆಸುತ್ತಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ (ಎನ್‍ಸಿಪಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ನಡೆದಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿ ಅವರನ್ನು ಆರ್‌ಎಸ್‌ಎಸ್ ಬೆಂಬಲಿಗರು ಹತ್ಯೆ ಮಾಡಿದ್ದಾರೆ. ಆಗ ಕೇಂದ್ರ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಾಭ್‍ಭಾಯಿ ಅವರು, ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡಿದ್ದರು. ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಿದ್ದ ಆರ್‌ಎಸ್‌ಎಸ್ ಅನ್ನು ಅನೇಕ ನಾಯಕರು ಒಪ್ಪಿಕೊಳ್ಳಲಿಲ್ಲ ಎಂದು ಹೇಳಿದರು. ಇದನ್ನು ಓದಿ: ಗಾಂಧೀಜಿಯನ್ನು ಕೊಂದವರಿಂದ ನಮ್ಗೆ ಪಾಠ ಬೇಕಿಲ್ಲ: ಕೈ ಅಭ್ಯರ್ಥಿ ಬಿ.ವಿ.ನಾಯಕ್
ಪ್ರಧಾನಿ ನರೇಂದ್ರ ಮೋದಿ ಅವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಮ್ಮು-ಕಾಶ್ಮೀರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅವರು ನಮಗೆ ಶಾಂತಿ, ನೆಮ್ಮದಿ ಕೊಟ್ಟಿದ್ದಾರಾ ಎಂದು ಸಮಾವೇಶದಲ್ಲಿ ಸೇರಿದ್ದ ಜನರನ್ನು ಪ್ರಶ್ನಿಸಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.
ಶ್ರೀನಗರ-ಜಮ್ಮು ಹೆದ್ದಾರಿ ಬಂದ್ ಮಾಡಿದ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಫಾರುಕ್ ಅಬ್ದುಲ್ಲಾ ಅವರು, ಬಿಜೆಪಿ ಸರ್ಕಾರ ರಸ್ತೆಯನ್ನು ಬಂದ್ ಮಾಡಿತು. ಕಾರ್ಗಿಲ್ ಯುದ್ಧ ಯಾವಾಗ ನಡೆಯಿತು ಸಮಾವೇಶದಲ್ಲಿ ಸೇರಿದ್ದ ಜನರನ್ನು ಪ್ರಶ್ನಿಸಿದ ಅವರು, ಯುದ್ಧದ ಬಳಿಕ ರಸ್ತೆ ಸಂಚಾರ ಬಂದ್ ಆಗಲಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ರಸ್ತೆ ತಡೆಯಲಿಲ್ಲ. ಈಗ ಯಾವ ಯುದ್ಧ ನಡೆಯುತ್ತದೆ? ಯಾವುದೇ ಯುದ್ಧ ನಡೆಯದಿದ್ದರೂ ರಸ್ತೆ ಸಂಚಾರ ಯಾಕೆ ಕಡಿತಗೊಳಿಸಲಾಗಿದೆ? ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂದು ದೂರಿದರು.