`ತಿಥಿ’ ಚಿತ್ರ ಖ್ಯಾತಿಯ ಹಳ್ಳಿ ಪ್ರತಿಭೆ ನಟ ಗಡ್ಡಪ್ಪ ನಿಧನರಾಗಿದ್ದಾರೆ.
ಅಸ್ತಮಾ ಜೊತೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಗಡ್ಡಪ್ಪ ತಿಂಗಳ ಹಿಂದಷ್ಟೇ ಮನೆಯಲ್ಲೇ ಎಡವಿ ಬಿದ್ದು ಸೊಂಟಕ್ಕೆ ಬಲವಾಗಿ ಪೆಟ್ಟು ಮಾಡಿಕೊಂಡಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.
ಮಂಡ್ಯ ಜಿಲ್ಲೆಯ ನೊದೆ ಕೊಪ್ಪಲು ಗ್ರಾಮದ ಗಡ್ಡಪ್ಪ ನಿಜ ಹೆಸರು ಚನ್ನೇಗೌಡ. `ತಿಥಿ’ ಸಿನಿಮಾದಲ್ಲಿ ಗಡ್ಡಪ್ಪ ಪಾತ್ರದ ಬಳಿಕ ಗಡ್ಡಪ್ಪ ಹೆಸರಿನಿಂದಲೇ ಗುರುತಿಸಿಕೊಂಡಿದ್ದರು. ಇವರಿಗೆ 89 ವರ್ಷ ವಯಸ್ಸಾಗಿತ್ತು.
ಹಲವು ಪ್ರಶಸ್ತಿಗಳನ್ನ ಬಾಚಿಕೊಂಡ `ತಿಥಿ’ ಸಿನಿಮಾದಲ್ಲಿ ಬೇರೆಲ್ಲ ಪಾತ್ರಕ್ಕಿಂತ ಹೆಚ್ಚು ಮಿಂಚಿದ್ದ ಪಾತ್ರವೇ ಗಡ್ಡಪ್ಪ ಕ್ಯಾರೆಕ್ಟರ್. ವೃದ್ಯಾಪ್ಯದಲ್ಲಿ ರಾತ್ರೋರಾತ್ರಿ ಸ್ಟಾರ್ ಆಗಿದ್ದವರು ಗಡ್ಡಪ್ಪ. ತಿಥಿ ಚಿತ್ರದ ಬಳಿಕ ತರ್ಲೆ ವಿಲೇಜ್, ಜಾನಿ ಮೇರಾ ನಾವ್, ಹಳ್ಳಿ ಪಂಚಾಯಿತಿ ಸೇರಿದಂತೆ ಒಟ್ಟೂ 10 ಚಿತ್ರಗಳಲ್ಲಿ ಗಡ್ಡಪ್ಪ ನಟಿಸಿದ್ದಾರೆ. ಸ್ವಗ್ರಾಮ ನೊದೆಕೊಪ್ಪಲು ಗ್ರಾಮದಲ್ಲಿ ಗಡ್ಡಪ್ಪ ಅಂತ್ಯಕ್ರಿಯೆ ನಡೆದಿದೆ.
ಬಡತನದಲ್ಲೇ ಹುಟ್ಟಿ ಬೆಳೆದ ಗಡ್ಡಪ್ಪಾಗೆ ತಿಥಿ ಚಿತ್ರದ ಬಳಿಕ ಬದುಕು ಸುಧಾರಿಸಿತ್ತು, ಇಳಿ ವಯಸ್ಸಿನಲ್ಲಿ ಅಭಿನಯಿಸಿ ಬಂದ ಹಣದಿಂದ ಇಡೀ ಕುಟುಂಬವನ್ನ ಗಡ್ಡಪ್ಪ ಸಾಕುತ್ತಿದ್ದರು. ಇದೀಗ ಹಿರಿಜೀವ ಕಳೆದುಕೊಂಡು ಕುಟುಂಬಸ್ಥರು ಕಂಗಾಲಾಗಿದ್ದಾರೆ. ಅದೃಷ್ಟ ಹಾಗೂ ಪ್ರತಿಭೆ ಇದ್ದರೆ ಒಂದಲ್ಲಾ ಒಂದು ಸ್ಟಾರ್ ಆಗಬಹುದು ಅನ್ನೋದಕ್ಕೆ ಉದಾಹರಣೆಯಾಗಿದ್ದರು ಗಡ್ಡಪ್ಪ. ಇದೀಗ ಈ ಕಲಾವಿದ ನೆನಪು ಮಾತ್ರ.

