ವಿಜಯಪುರ: ಇಂದು ಮಹಿಳಾ ದಿನಾಚರಣೆ. ಸಾಧನೆ ಮಾಡಿದ ಮಹಿಳೆಯರನ್ನ ಗುರುತಿಸಿ ಇಂದು ಸನ್ಮಾನಿಸಲಾಗುತ್ತದೆ. ಇಲ್ಲೊಬ್ಬರು ನಿಸ್ವಾರ್ಥದಿಂದ ಸುಮಾರು 50-60 ವರ್ಷಗಳಿಂದ ಸ್ಮಶಾನ ಕಾಯುತ್ತಿದ್ದಾರೆ. ಆದರೆ ಇವರಿಗೆ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯಗಳು ಕೂಡ ಇಲ್ಲದಂತಾಗಿದೆ.
ರಾಜ್ಯ ಸರ್ಕಾರ ಮಹಿಳಾ ದಿನಾಚರಣೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತದೆ. ಆದ್ರೆ ಇವರಿಗೆ ಮಹಿಳಾ ದಿನಾಚರಣೆ ಅಂದರೇನು ಎಂದು ಗೊತ್ತಿಲ್ಲ. ಇವರು ಮುಸ್ಲಿಂ ಸಮುದಾಯದವರು. ಮುಸ್ಲಿಂ ಸಮುದಾಯದಲ್ಲಿ ಮಹಿಳೆಯರು ಸ್ಮಶಾನಕ್ಕೆ ಹೋಗುವುದು ಹಾಗೂ ಸ್ಮಶಾನ ಕಾಯೋದು ನಿಷಿದ್ಧ. ಆದರೆ ನಗರದ ಅಲೀ ರೋಜಾ ಹತ್ತಿರವಿರುವ ಮುಸ್ಲಿಂ ಸಮುದಾಯದ ಸ್ಮಶಾನವನ್ನು ಹಸೀಂಬಿ ಮಕಾಂದರ ಎನ್ನುವ ಮಹಿಳೆ ಸುಮಾರು 50-60 ವರ್ಷಗಳಿಂದ ಕಾಯುತ್ತಾ ಜೀವನ ಸಾಗಿಸುತ್ತಿದ್ದಾರೆ.
Advertisement
Advertisement
ಹಸೀಂಬಿಗೆ ಸ್ಮಶಾನವೇ ಮನೆ, ಅವರಿಗೆ ಸ್ಮಶಾನವೆ ಜಗತ್ತು ಆಗಿದೆ. ಮುಸ್ಲಿಂ ಸಮುದಾಯದ ಯಾರಾದರು ನಿಧನರಾದರೇ ಹಸೀಂಬಿ ಅವರಿಗೆ ಎರಡು ಹೊತ್ತಿನ ಊಟ ಸಿಗುತ್ತದೆ. ಮೃತರ ಸಂಬಂಧಿಕರು 10, 20, 100 ರೂಪಾಯಿ ಕೊಟ್ಟರೆ ಮತ್ತೊಂದು ದಿನ ಊಟ ಆಗುತ್ತದೆ. ಎರಡು ಹೊತ್ತು ಊಟ ಮಾಡಿ ಸ್ಮಶಾನದಲ್ಲಿ ಎಲ್ಲಾದರೂ ಒಂದು ಮೂಲೆಯಲ್ಲಿ ಮಲಗಿ ಮತ್ತೆ ಬೆಳಗ್ಗೆ ತನ್ನ ಎಂದಿನ ಕೆಲಸದಲ್ಲಿ ಮಗ್ನರಾಗುತ್ತಾರೆ.
Advertisement
Advertisement
ಸ್ಮಶಾನದಲ್ಲಿರುವ ಮುಳ್ಳು, ಕಂಟಿ ಸೇರಿದಂತೆ ಗೋರಿ ಮೇಲೆ ಬಿದ್ದಿರುವ ಕಸವನ್ನ ತೆಗೆದು ಸ್ವಚ್ಛತೆಯನ್ನು ಮಾಡುತ್ತಾರೆ. ಇವರಿಗೆ ಸರ್ಕಾರ ಯಾವುದೇ ರೀತಿಯ ಸೌಲಭ್ಯ ನೀಡಿಲ್ಲ. ಕುಡಿಯಲು ನೀರಿಲ್ಲ, ಒಂದು ಸಣ್ಣ ಜೋಪಡಿ ಕೂಡ ಇಲ್ಲ. ಆದ್ದರಿಂದ ರಾಜ್ಯ ಸರ್ಕಾರ ಮಹಿಳಾ ದಿನಾಚರಣೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡದೆ ಇಂತಹ ಮಹಿಳೆಯರಿಗೆ ಧನ ಸಹಾಯ ಮಾಡಿದರೆ ಒಳ್ಳೆಯದು ಎಂದು ಸ್ಥಳೀಯರು ಹೇಳುತ್ತಿದ್ದಾರೆ.