Bengaluru CityDistrictsKarnatakaLatestMain Post

ಇದೇ ವಾರ ರಾಜಧಾನಿಗೆ ಪ್ರಧಾನಿ ಮೋದಿ- ಬೆಂಗಳೂರಿನಲ್ಲಿ ಅಖಾಡಕ್ಕಿಳಿದ ಸಿಎಂ

- ಮೋದಿ ಸಂಚರಿಸೋ ರಸ್ತೆ ರಿಪೇರಿಗೆ ತಯಾರಿ

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಬೆಂಗಳೂರಿಗೆ ಆಗಮಿಸುತ್ತಿದ್ದು, ಮೋದಿ ಸ್ವಾಗತಿಸಲು ರಾಜಧಾನಿ ಭರದಿಂದ ಸಿದ್ಧವಾಗುತ್ತಿದೆ. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವಂತೆ ಮೋದಿ ಕಾರ್ಯಕ್ರಮದ ತಾತ್ಕಾಲಿಕ ಪಟ್ಟಿ ಪಾಲಿಕೆ ಕೈ ಸೇರುತ್ತಿದ್ದಂತೆ, ಇದಕ್ಕಾಗಿ ಭಾರೀ ಸಿದ್ಧತೆಗೆ ಮುಂದಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿ (Bengaluru) ನಲ್ಲಿ ಕಳೆದ ಒಂದು ವಾರದಿಂದ ಯುದ್ಧೋಪಾದಿಯಲ್ಲಿ ಬಿಬಿಎಂಪಿ (BBMP) ಕಾಮಗಾರಿಗಳು ವೇಗ ಪಡೆದಿದೆ. ಖುದ್ದು ಸಿಎಂ ಬೊಮ್ಮಾಯಿ ಸಾಹೇಬ್ರೇ ಅಖಾಡಕ್ಕೆ ಎಂಟ್ರಿಯಾಗಿದ್ದಾರೆ. ಗುಂಡಿ ಮುಚ್ಚಲು (Pothole) ಏನ್ ದಾಡಿ ನಿಮಗೆ ಅಂತಾ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡಿದ್ದಾರೆ. ಪರಿಣಾಮ ನಗರದಲ್ಲಿ ಕಳೆದ 5 ದಿನಗಳಿಂದ ಗುಂಡಿ ಮುಚ್ಚುವ ಕಾರ್ಯ ಭರದಿಂದ ಸಾಗಿದೆ. ಈ ಎಲ್ಲಾ ಕಾಮಗಾರಿಗಳ ವೇಗಕ್ಕೆ ಪ್ರಧಾನಮಂತ್ರಿ ಮೋದಿ ಬೆಂಗಳೂರಿಗೆ ಬರುತ್ತಿರುವುದೇ ಕಾರಣ ಎನ್ನಲಾಗುತ್ತಿದೆ.

ಇದೇ ತಿಂಗಳು 11ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ಭಾಗವಹಿಸುವ ತಾತ್ಕಾಲಿಕ ಕಾರ್ಯಕ್ರಮಗಳ ಪಟ್ಟಿ ಸಿದ್ಧವಾಗಿದೆ. ಹೆಚ್‍ಎಎಲ್ ವಿಮಾನ ನಿಲ್ಡಾಣಕ್ಕೆ ಆಗಮಿಸುವ ಪ್ರಧಾನಿ ನಂತರ ಶಾಸಕರ ಭವನದ ಎದುರು ಕನಕದಾಸ ಪುತ್ಥಳಿಗೆ ಮಾರ್ಲಾಪಣೆ ಮಾಡಲಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ-ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಬಳಿಕ ಏರ್ ಪೋರ್ಟ್ ನಲ್ಲಿ ಕೆಂಪೇಗೌಡ ಟರ್ಮಿನಲ್-2, ಥೀಮ್ ಪಾರ್ಕ್ ಉದ್ಘಾಟನೆ, ಸಾರ್ವಜನಿಕ ಸಭೆ ನಡೆಸಲಿದ್ದಾರೆ.

ಇದೇ ತಿಂಗಳ 11ರಂದು ನಗರದಲ್ಲಿ ವಿವಿಧ ಕಾಮಗಾರಿಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ. ಹೆಚ್‍ಎಎಲ್ ವಿಮಾನ ನಿಲ್ಡಾಣಕ್ಕೆ ಬೆಳಗ್ಗೆ ಆಗಮಿಸಲಿರೋ ಮೋದಿ ನಂತರ ರಸ್ತೆ ಮೂಲಕವೇ ಪ್ರತಿಯೊಂದು ಕಾರ್ಯಕ್ರಮಕ್ಕೂ ಭೇಟಿ ನೀಡಲಿದ್ದಾರೆ.

ಎಲ್ಲೆಲ್ಲಿ ಗುಂಡಿಮುಕ್ತ ರೋಡ್ ಭಾಗ್ಯ..?
* ಪೂರ್ವ-ಪಶ್ಚಿಮ ವಿಭಾಗದಲ್ಲಿ ರಸ್ತೆಗಳು ಗುಂಡಿಮುಕ್ತ
* ರಸ್ತೆಗಳಿಗೆ ಅಗತ್ಯ ಇರುವ ಕಡೆ ಡಾಂಬರೀಕರಣ
* ಟ್ರಾಫಿಕ್ ಸಿಗ್ನಲ್ ಮಾರ್ಕಿಂಗ್
* ಗೋಡೆಗಳಿಗೆ ಬಣ್ಣ ಹಚ್ಚುವುದು
* ರೋಡ್ ಡಿವೈಡರ್‍ಗಳಲ್ಲಿ ಆಕರ್ಷಕ ಹೂಗಿಡ ಹಾಕುವುದು
* ರಸ್ತೆಗಳಲ್ಲಿ ರೋಡ್ ಮಾರ್ಕಿಂಗ್
* ಹಲವೆಡೆ ಕಲರ್ ಫುಲ್ ಲೈಟ್‍ಗಳ ಬಳಕೆ
* ಸರ್ಕಲ್‍ಗಳ ಬ್ಯೂಟಿಫಿಕೇಶನ್ ಕಾರ್ಯ

ಕಳೆದ ಬಾರಿ ಜ್ಞಾನಭಾರತಿ ಹಾಗೂ ಕೊಮ್ಮಘಟ್ಟ ರಸ್ತೆಯಲ್ಲಿ ಡಾಂಬರು ಕಿತ್ತು ಬಂದ ಪ್ರಕರಣ ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಿರುವ ಬಿಬಿಎಂಪಿ ಯುದ್ಧೋಪಾದಿಯಾಗಿ ಕಾರ್ಯೋನ್ಮುಖವಾಗಿದೆ.. ಇಂದಿನಿಂದ ಮೋದಿ ಸಂಚರಿಸುವ ರಸ್ತೆಗಳಿಗೆ ಸುಣ್ಣ ಬಣ್ಣ, ಡಾಂಬರೀಕರಣ ಇನ್ನಷ್ಟು ಜೋರಾಗಲಿದೆ.

ಈ ಬಾರಿ ಮೋದಿ ಆಗಮನಕ್ಕಾದ್ರೂ ಗುಣಮಟ್ಟ ರಸ್ತೆ ಹಾಕ್ತಾರಾ.? ಇಲ್ಲ ಕೋಟಿ ಕೋಟಿ ಹಣ ವ್ಯರ್ಥ ಮಾಡ್ತಾರಾ ಅಂತಾ ಕಾದುನೋಡ್ಬೇಕಿದೆ.

Live Tv

Leave a Reply

Your email address will not be published. Required fields are marked *

Back to top button