ಕೋಲಾರ: ಈ ಮರ ವರ್ಷಕ್ಕೊಮ್ಮೆ ಹೂ ಬಿಟ್ಟು, ತನ್ನ ನಗುವಿನಿಂದಲೇ ತನ್ನ ಸಮೃದ್ಧಿಯಿಂದಲೇ ಊರಿನ ಸಮೃದ್ಧಿಯನ್ನು ಸೂಚಿಸುವ ವಿಶೇಷವಾದ ಮರವೊಂದು ಜಿಲ್ಲೆಯಲ್ಲಿದೆ.
ಮೈತುಂಬ ಬಿಳಿಯ ಬಣ್ಣದ ಹೂ ಮುಡಿದು ನಗು ನಗುತ್ತಿರುವ ಬೃಹತ್ ಮರ, ಮರದ ಕೆಳಗೆ ಪ್ರತಿಷ್ಠಾಪನೆ ಮಾಡಲಾಗಿರುವ ನೂರಾರು ನಾಗರ ಕಲ್ಲುಗಳು. ಇಂತಹದೊಂದು ಅಪರೂಪದ ಮರ ಕೋಲಾರ ತಾಲೂಕಿನ ವಕ್ಕಲೇರಿ ಗ್ರಾಮದ ಬಳಿಯ ಬಿಳಿ ಬೆಟ್ಟದಲ್ಲಿದೆ.
Advertisement
ಈ ಅಪರೂಪವಾಗಿ ಕಂಡುಬರುವ ಜಾತಕ ಹೇಳುವ ಈ ಜಾಲಾರಿ ಮರ ವರ್ಷಕ್ಕೊಮ್ಮೆ ಹೂ ಬಿಡುತ್ತದೆ. ಮಹಾ ಶಿವರಾತ್ರಿ ಸಮಯದಲ್ಲಿ ಅಥವಾ ಯುಗಾದಿ ಸಮಯದಲ್ಲಿ ಹೂಬಿಡುವ ಮರ ಈ ಪ್ರದೇಶದ ಹವಾಮಾನ, ಮಳೆ, ಬೆಳೆ, ಸಮೃದ್ಧಿಯ ಸೂಚನೆಯನ್ನು ನೀಡುತ್ತದೆ. ಸಾಮಾನ್ಯವಾಗಿ ಮರ ಪೂರ್ತಿ ಹೂ ಬಿಟ್ಟರೆ ಆ ವರ್ಷ ಎಲ್ಲಾ ಭಾಗದಲ್ಲೂ ಸಮೃದ್ಧಿ ಎಂದು ಅರ್ಥ. ಒಂದು ವೇಳೆ ಮರದ ಕೆಲವೇ ಕೆಲವು ಭಾಗದಲ್ಲಿ ಹೂ ಬಿಟ್ಟರೆ ಹೂ ಬಿಟ್ಟಿರುವ ಭಾಗದಲ್ಲಿ ಮಾತ್ರ ಸಮೃದ್ಧಿಯಾಗಿ ಮಳೆ ಬೆಳೆಯಾಗುತ್ತದೆ ಎಂಬ ನಂಬಿಕೆ ಇದೆ.
Advertisement
Advertisement
ಒಂದು ವೇಳೆ ಮರದ ಒಂದೇ ಒಂದು ಭಾಗದಲ್ಲಿ ಹೂ ಬಿಟ್ಟರೆ ಆ ಭಾಗದಲ್ಲಿ ಮಾತ್ರ ಮಳೆ ಬೆಳೆಯಾಗಿ ಉಳಿದೆಡೆ ಬರಗಾಲ ಆವರಿಸುತ್ತದೆ ಎಂದರ್ಥ. ಆ ವರ್ಷದಲ್ಲಿ ಹೂ ಬಿಡದೇ ಬರೀ ಎಲೆ ಚಿಗುರು ಮೂಡಿದರೆ ಸಂಪೂರ್ಣ ಬರಗಾಲ ಎಂದು ನಂಬಲಾಗುತ್ತದೆ. ಕಳೆದ ವರ್ಷವೂ ಜಾಲಾರಿ ಮರ ಮೈತುಂಬ ಹೂ ಬಿಟ್ಟಿತ್ತು ಆ ಕಾರಣದಿಂದಲೇ ಕಳೆದ ವರ್ಷ ಉತ್ತಮ ಮಳೆಯಾಗಿತ್ತು. ಈ ವರ್ಷವೂ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿದೆ. ವಿಶೇಷತೆ ಎಂದರೆ ಎರಡು ವರ್ಷದ ಹಿಂದೆ ಹೂ ಬಿಡದ ಕಾರಣ ಜಿಲ್ಲೆಯಲ್ಲಿ ಬರಗಾಲ ಆವರಿಸಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
Advertisement
ಬಹಳ ಅಪರೂಪದ ಈ ಜಾಲಾರಿ ಮರವನ್ನು ಜಾತಕ ಹೇಳುವ ಮರ ಎಂದು ಕರೆಯುತ್ತಾರೆ. ಈ ಮರಕ್ಕೆ ದೈವಿ ಸ್ವರೂಪವನ್ನು ನೀಡಲಾಗಿದೆ. ಕಾರಣ ಈ ಮರದಲ್ಲಿ ಸಾಕ್ಷಾತ್ ಪರಮೇಶ್ವರನು ನೆಲೆಸಿರುತ್ತಾನೆ ಎಂಬ ನಂಬಿಕೆ ಇದೆ. ಅದಕ್ಕಾಗಿ ವರ್ಷಕ್ಕೊಮ್ಮೆ ಈ ಮರ ಹೂ ಬಿಟ್ಟಾಗ ಇಲ್ಲಿ ಪರಮೇಶ್ವರನ ರೂಪದಲ್ಲಿ ಈ ಮರದಲ್ಲಿ ಸರ್ಪಗಳು ಕಾಣಿಸಿಕೊಳ್ಳುತ್ತವೆ. ಅದಕ್ಕಾಗಿ ಸುಮಾರು ನೂರಾರು ವರ್ಷಗಳಷ್ಟು ಹಳೆಯದಾದ ಈ ಮರದ ಕೆಳಗೆ ನಾಗರಕಲ್ಲನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಅದರಂತೆ ನಾಗ ದೋಷಗಳು ಇದ್ದರೆ ಈ ಮರದ ಕೆಳಗೆ ನಿಂತು ದೇವರನ್ನು ಪ್ರಾರ್ಥನೆ ಮಾಡಿದ್ರೆ ದೋಷಗಳು ಸಹ ಪರಿಹಾರವಾಗುತ್ತದೆ ಎನ್ನುವ ನಂಬಿಕೆಯಿದೆ ಎಂದು ಸ್ಥಳಿಯರಾದ ಮುನಿಯಪ್ಪ ತಿಳಿಸಿದ್ದಾರೆ.