– ಚನ್ನಪಟ್ಟಣ ಅಖಾಡದಲ್ಲಿ `ಕೈ’ ಅಭ್ಯರ್ಥಿ ಬಿರುಸಿನ ಪ್ರಚಾರ
ರಾಮನಗರ: ಈ ಬಾರಿ ಕುಮಾರಸ್ವಾಮಿ ನೋಟು, ಯೋಗೇಶ್ವರ್‌ಗೆ ವೋಟು ಎಂದು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ (CP Yogeshwar)ವ್ಯಂಗ್ಯವಾಡಿದ್ದಾರೆ.
ರಾಜ್ಯದ ಮೂರು ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಚನ್ನಪಟ್ಟಣ (Channapatna) ಅಖಾಡದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಪ್ರಚಾರ ವೇಳೆ ಮಾತನಾಡಿದ ಅವರು, ಈ ಬಾರಿ ಚನ್ನಪಟ್ಟಣ ಅಖಾಡದಲ್ಲಿ ಕುಮಾರಸ್ವಾಮಿಗೆ (HD Kumarswamy) ನೋಟು ಬಂದರೆ ನನಗೆ ವೋಟು ಬರಲಿದೆ. ಕುಮಾರಸ್ವಾಮಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕಾರಣ ಈ ಉಪಚುನಾವಣೆ ಬಂದಿದೆ. ಅನಿತಾ ಕುಮಾರಸ್ವಾಮಿ ಅವರು ಎರಡು ಸಲ ನನ್ನ ಮೇಲೆ ಸ್ಪರ್ಧೆ ಮಾಡಿದ್ದರು. ರಾಜನಿಗೆ ವಯಸ್ಸಾದ ಮೇಲೆ ಮಗನಿಗೆ ಪಟ್ಟಾಭಿಷೇಕ ಮಾಡುವ ಹಾಗೇ ಇದೀಗ ಮಗನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ ಎಂದರು.ಇದನ್ನೂ ಓದಿ: ಕಾಂಗ್ರೆಸ್‍ನ ಹಗರಣದ ದಿಕ್ಕು ತಪ್ಪಿಸಲು ವಕ್ಫ್ ಮುನ್ನೆಲೆಗೆ: ಹೆಚ್‍ಡಿಕೆ ಆರೋಪ
ಕುಮಾರಸ್ವಾಮಿ ಶಾಸಕರಾಗಿದ್ದಾಗ ಏನು ಅಭಿವೃದ್ಧಿ ಮಾಡಿದ್ದಾರೆ? ಎಂದು ಜೆಡಿಎಸ್ ಮುಖಂಡರನ್ನು ಪ್ರಶ್ನೆ ಮಾಡುತ್ತೇನೆ. ಕೆರೆಗಳಲ್ಲಿ ಬೆಳೆದಿರುವ ಗಿಡಗಳನ್ನು ಕೂಡ ಅವರ ಕೈಯಲ್ಲಿ ತೆಗಿಸಲು ಸಾಧ್ಯವಾಗಲಿಲ್ಲ. ಇನ್ನೂ ನಾನು ತಂದಿದ್ದ ನೀರಾವರಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲೇ ಇಲ್ಲ. ಅವರ ಬಗ್ಗೆ ದೂರು ಹಾಕುತ್ತಿಲ್ಲ. ಅವರ ಕಾಲಾವಧಿಯಲ್ಲಿ ತಾಲೂಕು 8-10 ವರ್ಷ ಹಿಂದೆ ಬಿದ್ದಿದೆ. ಯಾವ ಮಾನದಂಡದ ಮೇಲೆ ಮಗನಿಗೆ ವೋಟ್ ಕೇಳೋಕೆ ಬರುತ್ತಿದ್ದಾರೆ ಎಂದು ಅವರೇ ಹೇಳಬೇಕು. ಅವರ ಮಗನಿಗೆ ವೋಟ್ ಕೇಳಲು ಜೆಡಿಎಸ್ ಮುಖಂಡರಿಗೆ ಯಾವ ನೈತಿಕತೆ ಇದೆ? ಎಂದು ಹೇಳಿದರು.
ನಾನು ಈ ತಾಲೂಕಿನ ಮನೆ ಮಗ. ನೀರಾವರಿ ಯೋಜನೆ ಮುಖಾಂತರ ತಾಲೂಕಿನ ಅಭಿವೃದ್ಧಿ ಜಪ ಮಾಡಿದ್ದೇನೆ. ನಮ್ಮವರೇ ರಾಜ್ಯದ ಡಿಸಿಎಂ ಆಗಿದ್ದಾರೆ. ಅವರ ಅಭಿವೃದ್ಧಿಯಲ್ಲಿ ಪಾಲುದಾರನಾಗಬೇಕು ಎಂದು ಕಾಂಗ್ರೆಸ್ ಸೇರಿದ್ದೇನೆ. ನನಗೆ ಒಬ್ಬ ದೈತ್ಯ, ಪ್ರಾಮಾಣಿಕ ಸುರೇಶ್‌ನ ಸೋಲಿಸಿದ್ದೀನಿ ಎನ್ನುವ ನೋವಿದೆ. ನನಗೆ ಕುಮಾರಸ್ವಾಮಿಯವರು ಎನ್‌ಡಿಎ ಟಿಕೆಟ್ ಕೊಡ್ತೀನಿ ಹೋಗಿ ಕೆಲಸ ಮಾಡು ಎಂದು ಹೇಳಿದ್ದರು. ಆದರೆ ಅವರ ಮಗನನ್ನು ನಿಲ್ಲಿದಲು ನನಗೆ ಟಿಕೆಟ್ ಕೊಡದೇ ನಾಟಕವಾಡಿದರು. ಹಾಗಾಗಿ ನಾನು ನನ್ನ ಮೂಲ ಪಕ್ಷ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದೇನೆ ಎಂದು ಹೇಳಿದರು.
ಮೂರು ದಿನಗಳಿಂದ ಸಿಪಿ ಯೋಗೇಶ್ವರ್ ಚುನಾವಣಾ ಪ್ರಚಾರ ಮಾಡುತ್ತಿದ್ದು, ಇಂದು ಚನ್ನಪಟ್ಟಣ ತಾಲೂಕಿನ ವಿರುಪಾಕ್ಷೀಪುರ, ಮಂಗಾಡಹಳ್ಳಿ, ಬಲ್ಲಾಪಟ್ಟಣ, ಕೋಡಂಬಳ್ಳಿ ಜಿ.ಪಂ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಹುಣಸನಹಳ್ಳಿ, ಅಂಚಿಪುರ, ಬಾಚಹಳ್ಳಿ ಸೇರಿ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮತಯಾಚನೆ ಮಾಡಲಿದ್ದಾರೆ. ಸಿಪಿವೈಗೆ ಮಾಜಿ ಸಂಸದ ಡಿಕೆ ಸುರೇಶ್, ಎಂಎಲ್ಸಿ ಪುಟ್ಟಣ್ಣ ಸೇರಿ ಸ್ಥಳೀಯ ಕಾಂಗ್ರೆಸ್ ನಾಯಕರ ಸಾಥ್ ನೀಡಿದ್ದಾರೆ. ಕೋಡಂಬಳ್ಳಿ ಜಿಪಂ ವ್ಯಾಪ್ತಿಯ ಮಂಗಾಡಹಳ್ಳಿ ಗ್ರಾಮದಿಂದ ಪ್ರಚಾರ ಆರಂಭಿಸಿದ ಸಿಪಿವೈಗೆ ಗ್ರಾಮಸ್ಥರು ಪಟಾಕಿ ಸಿಡಿಸಿ ಸ್ವಾಗತ ಕೋರಿದರು.ಇದನ್ನೂ ಓದಿ: ದೀಪಾವಳಿಯಂದು ‘ಪುಷ್ಪ 2’ ಅಪ್‌ಡೇಟ್- ಪುಷ್ಪರಾಜ್, ಶ್ರೀವಲ್ಲಿ ರೊಮ್ಯಾಂಟಿಕ್ ಪೋಸ್ಟರ್ ಔಟ್