ದೇಶದ ಐದು ಧಾರ್ಮಿಕ ಕೇಂದ್ರಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ

Public TV
4 Min Read
women exit temple

ಇಂದು ದೇವರ ನಾಡು ಕೇರಳದ ಶಬರಿಮಲೆಯ ಅಯ್ಯಪ್ಪ ದೇಗುಲವನ್ನು 40ರ ಆಸುಪಾಸಿನ ಇಬ್ಬರು ಮಹಿಳೆಯರು ಪ್ರವೇಶಿಸಿದ್ದಾರೆ. ಮಹಿಳೆಯರು ದೇಗುಲವನ್ನು ಪ್ರವೇಶಿಸಿದ ಕುರಿತು ಕೇರಳ ಸರ್ಕಾರ ಖಚಿತಪಡಿಸಿತ್ತು. ದೇಗುಲದ ಆಡಳಿತ ಮಂಡಳಿ ಸಹ ಸಿಸಿಟಿವಿ ಪರಿಶೀಲನೆ ನಡೆಸಿ ಮಹಿಳೆಯರ ಪ್ರವೇಶವನ್ನು ಖಚಿತಪಡಿಸಿಕೊಂಡು ದೇಗುಲವನ್ನು ಶುದ್ಧೀಕರಣಗೊಳಿಸಿದೆ.

ಮಹಿಳೆಯ ಪ್ರವೇಶಕ್ಕೆ ಧರ್ಮ ಗುರುಗಳು ಸೇರಿದಂತೆ ಹಲವರು ಅಕ್ರೋಶ ವ್ಯಕ್ತಪಡಿಸಿದ್ರೆ, ಮತ್ತೆ ಕೆಲವರು ಕಾನೂನಾತ್ಮಕವಾಗಿ ದೇವಾಲಯ ಪ್ರವೇಶಿಸುವ ಹಕ್ಕು ನಮಗಿದೆ. ದೇಗುಲ ಪ್ರವೇಶ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂಬ ವಾದವನ್ನು ಮಂಡಿಸುತ್ತಿದ್ದಾರೆ. ತನ್ನದೇ ಸಂಸ್ಕೃತಿ ಮತ್ತು ಇತಿಹಾಸವನ್ನು ಹೊಂದಿರುವ ಭಾರತದಲ್ಲಿ ಐದು ಧಾರ್ಮಿಕ ಕೇಂದ್ರಗಳಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಈ ಐದರಲ್ಲಿ ಅಯ್ಯಪ್ಪ ಸ್ವಾಮಿಯ ದೇಗುಲವನ್ನು ಪ್ರವೇಶ ಮಾಡುವ ಮೂಲಕ 800 ಇತಿಹಾಸಕ್ಕೆ ಬ್ರೇಕ್ ಬಿದ್ದಿದೆ. ಹಾಗಾದಾರೆ ಉಳಿದ ನಾಲ್ಕು ಧಾರ್ಮಿಕ ಕೇಂದ್ರಗಳ ಮಾಹಿತಿ ಇಲ್ಲಿದೆ.

1. ಹಾಜಿ ಅಲಿ ದರ್ಗಾ, ಮುಂಬೈ:
ಮುಂಬೈ ಕಡಲ ತೀರದಲ್ಲಿರುವ ಹಾಜಿ ಅಲಿ ದರ್ಗಾದ ಡೇರಾ ಬಳಿಗೆ ಬರಲು ಮಹಿಳೆಯರಿಗೆ ಅನುಮತಿ ಇಲ್ಲ. ಇದು 15ನೇ ಶತಮಾನದ ಸೂಫಿ ಹಾಜಿ ಅಲಿ ಅವರ ಸಮಾಧಿ ಸ್ಥಳವಾಗಿದೆ. ದರ್ಗಾ ಪ್ರವೇಶದಲ್ಲಿ ಮಹಿಳೆಯರಿಗಾಗಿಯೇ ವಿಶೇಷ ದ್ವಾರ ನಿರ್ಮಿಸಲಾಗಿದ್ದು, ಅಲ್ಲಿಂದಲೇ ಡೇರಾವನ್ನು ನೋಡಬಹುದು ಮತ್ತು ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ.

haji ali

ಮಹಿಳೆಯರು ಹಾಜಿ ಅಲಿ ದರ್ಗಾ ಪ್ರವೇಶಿಸಬಹುದು ಎಂದು 2016ರಲ್ಲಿ ಬಾಂಬೆ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ದರ್ಗಾಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧ ರದ್ದುಪಡಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಅವಕಾಶ ಕಲ್ಪಿಸಬೇಕೆಂದು ತೀರ್ಪು ನೀಡಿತ್ತು. ಬಾಂಬೆ ಹೈ ಕೋರ್ಟ್ ತೀರ್ಪು ಪ್ರಶ್ನಿಸಿ ದರ್ಗಾ ಮಂಡಳಿ ಸುಪ್ರಿಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಇದನ್ನೂ ಓದಿ : ಕೇರಳದ ಈ ದೇಗುಲಗಳಲ್ಲಿ ಪುರುಷರಿಗಿಲ್ಲ ಪ್ರವೇಶ

ಬಾಂಬೆ ಹೈಕೋರ್ಟ್ ತೀರ್ಪು ಪ್ರಕಟವಾಗುತ್ತಲೇ ಭೂಮಾತಾ ಬ್ರಿಗೇಡ್ ನ ಅಧ್ಯಕ್ಷೆ ತೃಪ್ತಿ ದೇಸಾಯಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ದರ್ಗಾ ಪ್ರವೇಶ ಮಾಡಿದ್ದರು. ಆದ್ರೆ ದರ್ಗಾದ ಸಮಾಧಿ ಸ್ಥಳಕ್ಕೆ ಮಾತ್ರ ಹೋಗಿರಲಿಲ್ಲ. ತೃಪ್ತಿ ದೇಸಾಯಿ ಅಹ್ಮದ್ ನಗರದ ಶನಿ ಶಿಗ್ನಾಪುರ ದೇವಸ್ಥಾನ ಮತ್ತು ನಾಶಿಕ್ ನ ತ್ರ್ಯಂಬಕೇಶ್ವರ ದೇವಾಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ದೊರಕಿಸುವ ಯಶಸ್ವಿ ಆಂದೋಲನ ನಡೆಸಿದ್ದರು. ಹಿಂದೆ ಅಯ್ಯಪ್ಪ ದೇಗುಲ ಪ್ರವೇಶಿಸಿ ವಿಫಲರಾಗಿದ್ದರು.

58Sabarimalatemple

2. ಅಯ್ಯಪ್ಪ ದೇಗುಲ, ಶಬರಿಮಲೆ:
ಬ್ರಹ್ಮಚಾರಿ ದೇವರು ಎಂದು ಕರೆಸಿಕೊಳ್ಳುವ ಅಯ್ಯಪ್ಪ ಸ್ವಾಮಿಯ ಸನ್ನಿಧಾನಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧವಿದೆ. 10 ರಿಂದ 50 ವರ್ಷದ ಒಳಗಿನ ಮಹಿಳೆಯರು ಕೂಡ ಶಬರಿಮಲೆ ದೇಗುಲ ಪ್ರವೇಶ ಮಾಡಬಹುದು ಎಂದು ಸೆಪ್ಟೆಂಬರ್ 28ರಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಇದಕ್ಕೆ ಬಲಪಂಥೀಯ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿವೆ. ವಿಶೇಷ ಪೂಜೆ ನಿಮಿತ್ತ ಅಕ್ಟೋಬರ್ ನಲ್ಲಿ ದೇವಾಲಯದ ಬಾಗಿಲು ತೆರೆಯಲಾಗಿತ್ತು. ಈ ವೇಳೆ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಹಾಗೂ ಆಂಧ್ರ ಪ್ರದೇಶದ ಪತ್ರಕರ್ತೆ ಕವಿತಾ ಜಕ್ಕಾಲ್ ಅಯ್ಯಪ್ಪನ ದೇಗುಲ ಪ್ರವೇಶಕ್ಕೆ ಮುಂದಾಗಿದ್ದರು. ಆದರೆ ದೇವಸ್ಥಾನ ಸಮೀಸುತ್ತಿದ್ದಂತೆ ಪ್ರತಿಭಟನಾಕಾರರು ಇದಕ್ಕೆ ಅವಕಾಶ ನೀಡಲಿಲ್ಲ. ಜನವರಿ 2ರ ಬೆಳಗಿನ ಜಾವ ಕನಕದುರ್ಗಾ ಮತ್ತು ಬಿಂದು ಎಂಬವರು ದೇಗುಲವನ್ನು ಪ್ರವೇಶಿಸುವ ಮೂಲಕ 800 ವರ್ಷಗಳ ಇತಿಹಾಸವನ್ನು ಮುರಿದಿದ್ದಾರೆ.

Patbausi Satra

3. ಪತ್‍ಬೌಸಿ ಸತ್ರ, ಅಸ್ಸಾಂ
ಅಸ್ಸಾಂ ರಾಜ್ಯದ ಬರ್ಪಟೆ ಜಿಲ್ಲೆಯ ಪತ್‍ಬೌಸಿ ಸತ್ರ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧವಿದೆ. ದೇಗುಲದಲ್ಲಿ ಶುದ್ಧತೆಯನ್ನು ಕಾಪಾಡುವುದಕ್ಕೆ ಮಹಿಳೆಯರಿಗೆ ಅವಕಾಶ ಕಲ್ಪಿಸಲ್ಲ ಎಂಬುವುದು ದೇಗುಲ ಮಂಡಳಿಯ ವಾದ. ಇಲ್ಲಿ ವೈಷ್ಣವ ಗುರುಗಳನ್ನು ಪೂಜಿಸಲಾಗುತ್ತಿದ್ದು, ಶಂಕರದೇವ ಮತ್ತು ಮಂಟಾ ಶಂಕರದೇವ ಎಂಬ ಮಂದಿರಗಳಿವೆ. 2010ರಲ್ಲಿ ಅಂದಿನ ಅಸ್ಸಾಂ ರಾಜ್ಯಪಾಲ ಜೆಬಿ ಪಟ್ನಾಯಕ್ 20 ಮಹಿಳೆಯರೊಂದಿಗೆ ಸತ್ರಾ ಪ್ರವೇಶ ಮಾಡಿದ್ದರು. ಆದ್ರೆ ಇಂದೂ ಸಹ ಸತ್ರದಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ.

4. ಕಾರ್ತಿಕೇಯ ದೇವಾಲಯ, ಹರಿಯಾಣ
ಹರಿಯಾಣ ರಾಜ್ಯದ ಕುರುಕ್ಷೇತ್ರ ಜಿಲ್ಲೆಯ ಪೆಹುವಾ ನಗರದಲ್ಲಿ ಕಾರ್ತಿಕೇಯ ದೇವಾಲಯವಿದೆ. ಬ್ರಹ್ಮಚಾರಿ ಕಾರ್ತಿಕೇಯ ದೇವರಿಗೆ ಇಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಒಂದು ವೇಳೆ ಮಹಿಳೆಯರು ದೇಗುಲ ಪ್ರವೇಶ ಮಾಡಿದ್ರೆ ಕಾರ್ತಿಕೇಯ ಶಾಪ ನೀಡುತ್ತಾನೆ ಎನ್ನುವ ನಂಬಿಕೆಯಿದೆ. ದೇಗುಲದ ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಕಥೆಗಳನ್ನು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾರ್ತಿಕೇಯ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ.

kartikeya

5. ರಂಕಾಪುರ ದೇವಾಲಯ, ರಾಜಸ್ಥಾನ
ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳ ಪಟ್ಟಿಯಲ್ಲಿ ರಂಕಾಪುರ ದೇವಾಲಯ ಸಹ ಒಂದು. ಈ ದೇವಾಲಯಕ್ಕೆ ದೇಶ-ವಿದೇಶ ಪ್ರವಾಸಿಗರು ಭೇಟಿ ನೀಡುತ್ತಾರೆ. ವಿಶೇಷ ಕೆತ್ತನೆಯಿಂದ ದೇಗುಲ ನಿರ್ಮಾಣವಾಗಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಮುಟ್ಟಾದ ಮಹಿಳೆಯರು ದೇವಾಲಯ ಪ್ರವೇಶ ಮಾಡಬಾರದೆಂಬ ನಿಯಮವಿದೆ. ದೇವಾಲಯ ಪ್ರವೇಶಿಸುವ ಮಹಿಳೆಯರು ಪಾಶ್ಚಾತ್ಯ ಬಟ್ಟೆ ಧರಿಸುವಂತಿಲ್ಲ ಹಾಗು ದೇಗುಲದ ಆವರಣದಲ್ಲಿ ಪಾದಗಳು ಮುಚ್ಚಿರಬೇಕೆಂಬ ಕಟ್ಟುನಿಟ್ಟಿನ ನಿಯಮವಿದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಮಹಿಳೆಯರಿಗೆ ಪ್ರವೇಶಕ್ಕೆ ಸಂಪೂರ್ಣ ನಿಷೇಧಿಸಲಾಗಿರುತ್ತದೆ.

ranakpur jain temples

ಇನ್ನುಳಿದಂತೆ ಹಲವು ದೇವಾಲಯ, ದರ್ಗಾಗಳಲ್ಲಿ ಗರ್ಭಗುಡಿ ಅಥವಾ ಡೇರಾ ಅಥವಾ ಪೌಳಿ ಬಳಿ ಮಹಿಳೆಯರಿಗೆ ಪ್ರವೇಶವಿಲ್ಲ. ಆಂಧ್ರ ಪ್ರದೇಶದ ವಿಜಯವಾಡ ನಗರದಲ್ಲಿರುವ ಭವಾನಿ ದೀಕ್ಷಾ ಮಂದಪಮ್, ಉತ್ತರ ಪ್ರದೇಶದ ರಿಷಿ ಧ್ರೂಮ್ ಆಶ್ರಮ, ದೇಗುಲ, ಧರ್ಮಸ್ಥಳದ ಅಣ್ಣಪ್ಪ ದೇಗುಲಕ್ಕೆ ಪ್ರವೇಶವಿಲ್ಲ.

ಮಹಿಳೆಯರಿಗೆ ಧಾರ್ಮಿಕ ಸ್ಥಳಗಳಲ್ಲಿ ಪ್ರವೇಶ ನೀಡಬೇಕೇ ಅಥವಾ ನಿಷೇಧಿಸಬೇಕೇ? ಇಂದು ನಸುಕಿನ ಜಾವ ಬಿಂದು ಮತ್ತು ಕನಕದುರ್ಗ ಅಯ್ಯಪ್ಪ ಸ್ವಾಮಿ ದೇವಾಲಯವನ್ನು ಪ್ರವೇಶಿಸಿದ್ದಕ್ಕೆ ನಿಮ್ಮ ಅಭಿಪ್ರಾಯ ಏನು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *