ಲಿಂಗ ತಾರತಮ್ಯಕ್ಕೆ ಬ್ರೇಕ್‌ – ಕೇರಳ ಶಾಲೆಯಲ್ಲಿ ಒಂದೇ ವಿನ್ಯಾಸದ ಸಮವಸ್ತ್ರ

Public TV
3 Min Read
kerala uniform 2

ತಿರುವನಂತಪುರಂ: ಕೇರಳದ ಶಾಲೆಯೊಂದು ಎಲ್ಲ ಮಕ್ಕಳಿಗೂ ಲಿಂಗ ತಾರತಮ್ಯವಿಲ್ಲದೇ ಒಂದೇ ವಿನ್ಯಾಸದ ಸಮವಸ್ತ್ರ ನೀಡಿ ಮಾದರಿಯಾಗಿದೆ.

ಕೊಚ್ಚಿಯ ವಲಯಂಚಿರಂಗರ ಸರ್ಕಾರಿ ಪ್ರಾಥಮಿಕ ಶಾಲೆಯು ತನ್ನ ಎಲ್ಲ ವಿದ್ಯಾರ್ಥಿಗಳಿಗೆ ಸಾಮಾನ್ಯವಾದ ಲಿಂಗ-ತಟಸ್ಥ ಸಮವಸ್ತ್ರವನ್ನು ಅಳವಡಿಸಿಕೊಂಡಿದೆ. ಶಾಲೆಯ ಆಗಿನ ಮುಖ್ಯೋಪಾಧ್ಯಾಯಿನಿ 2018 ರಲ್ಲಿ ಪರಿಚಯಿಸಿದ ಲಿಂಗ-ತಟಸ್ಥ ಸಮವಸ್ತ್ರ ನೀತಿಯ ಪ್ರಕಾರ ವಿದ್ಯಾರ್ಥಿಗಳು ಶರ್ಟ್ ಮತ್ತು ತ್ರೀ-ಫೋರ್ತ್ ಪ್ಯಾಂಟ್ ಧರಿಸಬೇಕು. ಈ ಸಮವಸ್ತ್ರವನ್ನು ಹುಡುಗಿಯರೂ ಸಹ ಧರಿಸಬೇಕು ಎಂದು ಸೂಚನೆಯನ್ನು ನೀಡಲಾಗಿತ್ತು. ಈ ಸೂಚನೆಯನ್ನು ಇಂದಿಗೂ ಶಾಲೆ ಪಾಲಿಸುತ್ತಿದೆ. ಇದನ್ನೂ ಓದಿ:  ಶಾರ್ಟ್ಸ್ ಧರಿಸಿದ್ದಕ್ಕೆ ಬ್ಯಾಂಕ್ ಒಳಗೆ ಬಿಡದ SBI ಸಿಬ್ಬಂದಿ

kerala uniform

2018ರಲ್ಲಿ ಈ ಸಮವಸ್ತ್ರವನ್ನು ಪರಿಚಯಿಸಿದ ಮಾಜಿ ಮುಖ್ಯೋಪಾಧ್ಯಾಯಿನಿ ಸಿ ರಾಜಿ ಈ ಕುರಿತು ಮಾತನಾಡಿದ್ದು, ಇದು ಉತ್ತಮ ದೃಷ್ಟಿ ಹೊಂದಿರುವ ಶಾಲೆಯಾಗಿದೆ. ನಾವು ಶಾಲೆಯಲ್ಲಿ ಹೊಸ ರೀತಿ ಕ್ರಮ ಜಾರಿಗೆ ತರಲು ಮಾತನಾಡುತ್ತಿರುವಾಗ ಲಿಂಗ ಸಮಾನತೆ ಮುಖ್ಯ ವಿಷಯವಾಗಿತ್ತು. ಆದ್ದರಿಂದ ಸಮವಸ್ತ್ರವನ್ನು ಒಂದೇ ರೀತಿ ಮಾಡಬೇಕು ಎಂದು ನಾವು ನಿರ್ಧರಿಸಿದ್ದೆವು.

ಅದಕ್ಕೇನು ಮಾಡೋದು ಅಂತ ಯೋಚಿಸ್ತಾ ಇದ್ದಾಗ, ವಿದ್ಯಾರ್ಥಿನಿಯರಿಗೆ ಸ್ಕರ್ಟ್ ವಿಚಾರದಲ್ಲಿ ತುಂಬಾ ಸಮಸ್ಯೆಗಳನ್ನ ಎದುರಿಸುತ್ತಿರುವುದು ನಮ್ಮ ಗಮನಕ್ಕೆ ಬಂತು. ಈ ಕುರಿತು ನಾವು ಎಲ್ಲರೊಂದಿಗೆ ಚರ್ಚಿಸಿದೆವು. 90% ರಷ್ಟು ಪೋಷಕರು ಲಿಂಗ-ತಟಸ್ಥ ಸಮವಸ್ತ್ರವನ್ನು ಬೆಂಬಲಿಸಿದರು. ಮಕ್ಕಳು ಸಹ ಖುಷಿಯಾದರು. ಈ ಬಗ್ಗೆ ಈಗ ಚರ್ಚೆಯಾಗುತ್ತಿರುವುದಕ್ಕೆ ನನಗೆ ತುಂಬ ಸಂತೋಷ ಮತ್ತು ಹೆಮ್ಮೆ ಅನಿಸುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಲಿಂಗ ಸಮಾನತೆ ವಿದ್ಯಾರ್ಥಿಗಳು ಮತ್ತು ಪೋಷಕರ ಮನಸ್ಸಿನಲ್ಲಿರಬೇಕು. ಸ್ಕರ್ಟ್ ಧರಿಸುವಾಗ ಹುಡುಗಿಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಶೌಚಾಲಯಕ್ಕೆ ಹೋಗುವಾಗ ಮತ್ತು ಆಟವಾಡುವಾಗ ತೊಂದರೆಗಳು ಉಂಟಾಗುತ್ತವೆ. ಅದೂ ಒಂದು ಅಂಶ. ಈ ಉಡುಪನ್ನು ಲಿಂಗ-ತಟಸ್ಥ ಸಮವಸ್ತ್ರದ ಪರಿಕಲ್ಪನೆಯಿಂದ ಪಡೆಯಲಾಗಿದೆ. ಇದು 105 ವರ್ಷಗಳಷ್ಟು ಹಳೆಯದಾದ ಶಾಲೆ. ಆದ್ದರಿಂದ, ಯಾರಿಂದಲೂ ಇದಕ್ಕೆ ವಿರೋಧ ವ್ಯಕ್ತವಾಗಲಿಲ್ಲ. ಶೈಕ್ಷಣಿಕ ಸಮಿತಿಯ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಂಡರು. ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮನ್ನಣೆ ಸಿಕ್ಕಿತ್ತು ಎಂದು ಶಾಲಾ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ಎನ್.ಪಿ.ಅಜಯಕುಮಾರ್ ಹೇಳಿದರು. ಇದನ್ನೂ ಓದಿ: ಮದುವೆ ಫೋಟೋ ಜೊತೆಗೆ ಭಾವನಾತ್ಮಕ ಸಾಲು ಬರೆದು ಶೇರ್ ಮಾಡಿ ಶಿಲ್ಪಾ ಶೆಟ್ಟಿ

kerala uniform 1

ಈಗಿನ ಮುಖ್ಯೋಪಾಧ್ಯಾಯಿನಿ ಸುಮಾ ಕೆ.ಪಿ. ಈ ಕುರಿತು ಪ್ರತಿಕ್ರಿಯಿಸಿದ್ದು, ಈ ನಿರ್ಧಾರವನ್ನು 2018 ರಲ್ಲಿ ಜಾರಿಗೆ ತರಲಾಗಿದ್ದರೂ, ಈ ಸಮವಸ್ತ್ರವು ಮಕ್ಕಳಿಗೆ ತುಂಬಾ ಆತ್ಮವಿಶ್ವಾಸವನ್ನು ನೀಡಿತು. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಏನು ಬೇಕಾದರೂ ಮಾಡಲು ಈ ಸಮವಸ್ತ್ರ ತುಂಬಾ ಸಹಕಾರಿ. ಈ ನಿರ್ಧಾರದಿಂದ ಅವರು ಮತ್ತು ಅವರ ಪೋಷಕರು ತುಂಬಾ ಸಂತೋಷಪಟ್ಟಿದ್ದಾರೆ. ಗಂಡು-ಹೆಣ್ಣು ಮಕ್ಕಳಿಗೆ ಸಮಾನ ಸ್ವಾತಂತ್ರ್ಯ, ನೆಮ್ಮದಿ ಸಿಗಬೇಕು ಎಂಬ ಚಿಂತನೆಯೇ ಈ ನಿರ್ಧಾರಕ್ಕೆ ಕಾರಣ ಎನ್ನುತ್ತಾರೆ.

ಪಾಲಕರು ಮತ್ತು ಶಿಕ್ಷಕರ ಸಂಘದ ಅಧ್ಯಕ್ಷ ವಿ ವಿವೇಕ್, ನನ್ನ ಮಕ್ಕಳು 2018 ರಲ್ಲಿ ಈ ಶಾಲೆಗೆ ಸೇರಿದ್ದಾರೆ. ಹುಡುಗರು ಮತ್ತು ಹುಡುಗಿಯರಿಗೆ ಸಮಾನತೆ ಬೇಕು. ಇದು ಈ ಸಮವಸ್ತ್ರ ಹಿಂದಿನ ಆಲೋಚನೆಯಾಗಿದೆ. ಈ ಸಮವಸ್ತ್ರದಲ್ಲಿ ವಿದ್ಯಾರ್ಥಿಗಳು ಯಾವುದೇ ಚಟುವಟಿಕೆಯನ್ನು ಮಾಡಬಹುದು ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *