ಚಿಕ್ಕಮಗಳೂರು: ರಮಾನಾಥ ರೈ ಗೃಹ ಸಚಿವ ಆಗುವುದು ನನಗೆ ಸಂತೋಷ ತಂದಿದೆ ಎಂದು ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಹೇಳಿದರು.
ಮೂಡಿಗೆರೆಯ ಸಾರ್ವಜನಿಕ ಗಣಪತಿ ಸೇವಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಮಾನಾಥ ರೈ ಅವರು ಸಿಟ್ಟಿನಿಂದ, ದ್ವೇಷದಿಂದ, ಆವೇಷದಿಂದ ಧರ್ಮವಿರೋಧಿ ಕೆಲಸ ಮಾಡಬಾರದು. ಏಕೆಂದರೆ ಗೃಹ ಅಂದರ ಮನೆ, ಮನೆ ಆನಂದ, ಸಂತೋಷ ನೀಡುವಂತಹ ಜಾಗ. ರೈ ಅವರಿಗೆ ಇಡೀ ರಾಜ್ಯವೇ ಮನೆ ಇದ್ದ ಹಾಗೆ. ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ನೀಡಿ ರಾಜಕೀಯ ವೈರತ್ವ ಮರೆತು ಕೆಲಸ ಮಾಡಲಿ ಎಂದು ರೈ ಅವರಿಗೆ ಸಲಹೆ ನೀಡಿದರು.
Advertisement
ಕೊಲ್ಲೂರು ದೇವಾಲಯದಿಂದ ಕಲ್ಲಡ್ಕ ಶ್ರೀರಾಮ ಶಾಲೆಗೆ ಅನುದಾನ ನಿಲ್ಲಿಸಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾನು ಕಾನೂನು ಸಮರ ನಿಲ್ಲಿಸೋದು ಇಲ್ಲ, ಅವರ ಕಾಲಿಗೂ ಬೀಳೋದಿಲ್ಲ. ಸರ್ಕಾರ ಮಕ್ಕಳಿಗೆ ಮೋಸ ಮಾಡುತ್ತಿದೆ ಎಂದು ಹೇಳಿದರು.
Advertisement
ಸಿದ್ದರಾಮಯ್ಯ ನಾನು ಅಹಿಂದ ಸಿಎಂ ಎಂದು ಹೇಳುತ್ತಾರೆ. ಆದರೆ ಕಲ್ಲಡ್ಕ ಶಾಲೆಯಲ್ಲಿ ಶೇ.94 ರಷ್ಟು ಅಹಿಂದ ಮಕ್ಕಳಿದ್ದಾರೆ. ಈ ಸರ್ಕಾರ ಮಕ್ಕಳ ಹೊಟ್ಟೆ ಮೇಲೆ ಹೊಡೆದಿದೆ. ಇದು ಅಧರ್ಮದಲ್ಲಿ ನಡೆಯುತ್ತಿರೋ ಸರ್ಕಾರ. ಇವರಿಗೆ ರಾಜಕೀಯ ದ್ವೇಷವಿದ್ದರೆ ಅಖಾಡಕ್ಕೆ ಬರಲಿ ಹೋರಾಡೋಣ. ಅದನ್ನು ಬಿಟ್ಟು ಮಕ್ಕಳ ಜೊತೆ ಹೋರಾಡಬಾರದು ಯಾರೇ ಆಗಲಿ ಯಾವ ಪಕ್ಷದವರೇ ಆಗಲಿ, ಮಕ್ಕಳ ಅನ್ನಕ್ಕೆ ಕನ್ನ, ಕಲ್ಲು ಹಾಕಬಾರದು ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.
Advertisement
ಮೂಡಿಗೆರೆಯ ಹ್ಯಾಂಡ್ ಪೋಸ್ಟ್‍ನಿಂದ ಬೈಕ್ ಜಾಥಾ ಮಾಡುವ ಮೂಲಕ ಪ್ರಭಾಕರ್ ಭಟ್ ಅವರನ್ನು ಸ್ವಾಗತಿಸಿಕೊಂಡರು. ಕಲ್ಲಡ್ಕ ಪ್ರಭಾಕರ್ ಭಟ್ ಮೆರವಣಿಗೆಗಾಗಿ ಸ್ಥಳೀಯರು ತೆರೆದ ಜೀಪ್ ಸಿದ್ಧಪಡಿಸಿಕೊಂಡಿದ್ದರು. ಆದರೆ ಪ್ರಭಾಕರ್ ಭಟ್ ಮೆರವಣಿಗೆಯಲ್ಲಿ ಪಾಲ್ಗೊಳ್ಳದೆ ತಮ್ಮ ಕಾರಿನಲ್ಲಿ ನೇರವಾಗಿ ರಂಗಮಂದಿರದ ಬಳಿ ಬಂದು ಗಣಪತಿಯ ಹೋಮ-ಹವನ ಪೂಜೆಯಲ್ಲಿ ಪಾಲ್ಗೊಂಡು ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು.
Advertisement
ನಗರದಾದ್ಯಂತ 800 ಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅನೇಕ ಷರತ್ತು ವಿಧಿಸಿ ಕಲ್ಲಡ್ಕ ಪ್ರಭಾಕರ್ ಭಟ್ ಆಗಮನಕ್ಕೆ ಪೊಲೀಸರು ಅನುವು ಮಾಡಿಕೊಟ್ಟಿದ್ದರು.