ವಿಜಯಪುರ: ಇದು ವಿಜಯೇಂದ್ರನ ತಂಡ. ಇದಕ್ಕೆ ನಮ್ಮ ಬಹಿಷ್ಕಾರ ಇದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ಕಿಡಿಕಾರಿದ್ದಾರೆ.
ಜಿಲ್ಲೆಯಲ್ಲಿ ವಕ್ಫ್ ದಂಗಲ್ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಅಹವಾಲು ಸ್ವೀಕರಿಸಲು ಬಿಜೆಪಿಯಿಂದ ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಹಾಲಿ ಸಂಸದ, ಶಾಸಕ ನಾನು ಇದ್ದೇನೆ. ನಮ್ಮನ್ನ ಹೊರಗಿಟ್ಟು ತಂಡ ರಚಿಸಿದ್ದಾರೆ. ಇದು ವಿಜಯೇಂದ್ರನ ತಂಡಕ್ಕೆ ನಾನು ಬಹಿಷ್ಕಾರ ಹಾಕಿದ್ದೇನೆ. ವಕ್ಫ್ ವಿರುದ್ಧ ಮೊದಲು ಹೋರಾಟ ಪ್ರಾರಂಭಿಸಿದ್ದೇ ನಾನು. ವಿಜಯೇಂದ್ರ ನನ್ನನ್ನು ತುಳಿಯಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ರೈತರ ಅಹವಾಲು ಆಲಿಸಲು ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ ಹಾಗೂ ಶಾಸಕರ ಸೇರಿ ರಚನೆ ಮಾಡಿದೆ. ತಂಡ ನಾಳೆಯೇ (ಅ.29) ಜಿಲ್ಲೆಯಲ್ಲಿ ಪ್ರವಾಸ ಮಾಡಿ ಅಹವಾಲು ಆಲಿಸಲಿದ್ದಾರೆ. ಸಂಸದ ಗೋವಿಂದ ಕಾರಜೋಳ, ಶಾಸಕ ಹರೀಶ್ ಪೂಂಜಾ, ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಎಂಎಲ್‌ಸಿ ಅರುಣ್ ಶಹಾಪುರ ಹಾಗೂ ಮುಖಂಡ ಕಲ್ಮರುಡಪ್ಪ ಸೇರಿದಂತೆ ಹಲವು ಶಾಸಕರನ್ನು ತಂಡ ಒಳಗೊಂಡಿದೆ. ಆದರೆ ವಿಜಯಪುರ ನಗರ ಶಾಸಕನಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಂಸದ ರಮೇಶ್ ಜಿಗಜಿಣಗಿಗೆ ತಂದಡಲ್ಲಿ ಸ್ಥಾನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ನಾಲ್ಕೇ ತಿಂಗಳಿಗೆ ಪಾಕ್ ತಂಡದ ಮುಖ್ಯ ಕೋಚ್ ಹುದ್ದೆಗೆ ಗ್ಯಾರಿ ಗುಡ್‌ಬೈ
ಇದು ವಿಜಯೇಂದ್ರ ಟೀಮ್. ಎಲ್ಲಾ ಮುಗಿದ ಮೇಲೆ ಟೀಂ ಮಾಡಿದ್ದಾರೆ. ಇದು ಕಾಟಾಚಾರಕ್ಕೆ ಮಾಡಿದ ಟೀಂ ಹಾಗಾಗಿ ನಾನು ಹಾಗೂ ಲೋಕಸಭಾ ಸದಸ್ಯರು ಬಿಜೆಪಿ ತಂಡಕ್ಕೆ ಬಹಿಷ್ಕಾರ ಹಾಕಿದ್ದೇವೆ. ಹಿಂದೆ ಯಡಿಯೂರಪ್ಪ ಸಿಎಂ ಇದ್ದಾಗ ಜಮೀರ್ ಅಹ್ಮದ್ ಖಾನ್‌ಗೆ 1,000 ಕೋಟಿ ರೂ. ಅನುದಾನ ನೀಡಿದ್ದರು. ಇದನ್ನು ನಾನು ಪ್ರಸ್ತಾಪಿಸಿ ವಿರೋಧ ಮಾಡಿದ್ದಕ್ಕೆ ಅದನ್ನು ವಾಪಸ್ ಪಡೆದರು. ಪಬ್ಲಿಕ್ ಟಿವಿಯಲ್ಲಿ ರಂಗನಾಥ್ ಅವರು ಇದರ ಬಗ್ಗೆ ಪ್ರಸ್ತಾಪಿಸಿದ ಮೇಲೆ ಹಿಂಪಡೆದರು. ಪೂಜ್ಯ ತಂದೆಯವರು ಕಿರಿಯ ಮಗ ಜಮೀರ್‌ಗೆ ಸಾವಿರ ಕೋಟಿ ರೂ. ಅನುದಾನ ನೀಡಿದ್ದರು. ರೂಪಾಯಿ ಅನುದಾನ ನೀಡಲು ಏನಾದರೂ ತೆಗೆದುಕೊಂಡಿರಬೇಕಲ್ಲ ಎಂದು ಕುಟುಕಿದರು.
ಇದೇ ವೇಳೆ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ ಅವರು, ವಿಜಯೇಂದ್ರ ಇಂತಹ ವ್ಯವಹಾರಗಳನ್ನು ಬಿಡಬೇಕು. ಇಲ್ಲಿ ನಾನು ಶಾಸಕ ಹಾಗೂ ನಮ್ಮ ಲೋಕಸಭಾ ಸದಸ್ಯರಿದ್ದಾರೆ. ನಮ್ಮಿಬ್ಬರನ್ನ ಬಿಟ್ಟು ಸಮಿತಿ ಮಾಡಲಾಗಿದೆ. ಇದು ನಿಜವಾಗಿ ಹೋರಾಟ ಮಾಡುವವರನ್ನು ತುಳಿದಂತಾಗುತ್ತದೆ. ಪೂಜ್ಯ ತಂದೆಯವರು ಅದನ್ನೇ ಮಾಡಿದರು ಪೂಜ್ಯ ತಂದೆಯವರ ಮಗನೂ ಅದನ್ನೇ ಮಾಡುತ್ತಿದ್ದಾರೆ. ವಕ್ಫ್ ವಿಚಾರವಾಗಿ ಈ ಹಿಂದೆ ವಿಧಾನಸಭೆಯಲ್ಲಿ ನಾನೇ ಮಾತನಾಡಿದೆ. ನಾನು ವಿಧಾನಸಭೆಯಲ್ಲಿ ಮಾತನಾಡಿದ್ದರ ಕುರಿತು ದಾಖಲೆ ಇದೆ. ಸಹಿ ಮಾಡಿದ್ದ ಯಾರೊಬ್ಬರೂ ವಿಧಾನಸಭೆಯಲ್ಲಿ ವಕ್ಫ್ ಬಗ್ಗೆ ಮಾತನಾಡಲು ಮುಂದೆ ಬಂದಿರಲಿಲ್ಲ. ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಅವರು ನನ್ನನ್ನು ಕರೆಯಿಸಿ ವಕ್ಫ್ ಕುರಿತು ಮಾತನಾಡಲು ಹೇಳಿದರು. ಯಾರು ಮಾತನಾಡಲು ಸಿದ್ಧರಿರಲ್ಲ, ಅಧ್ಯಯನ ಮಾಡಿಲ್ಲ. ನೀವೇ ಮಾತನಾಡಿ ಎಂದು ಹೇಳಿದ್ದಕ್ಕೆ ನಾನು ದಾಖಲೆಗೆ ಸಹಿ ಮಾಡಿ ಮಾತನಾಡಿದೆ. ನಾನು ರಾಜ್ಯದಲ್ಲಿ ವಕ್ಫ್ ಕುರಿತು ಹೋರಾಟ ಆರಂಭಿಸಿದ್ದೆ. ವಕ್ಫ್ ಆಸ್ತಿ ಕುರಿತು ರಾಜ್ಯದಲ್ಲಿ ಹಾಗೂ ದೇಶದಲ್ಲಿ ತಪ್ಪು ಮಾಹಿತಿ ನೀಡುತ್ತಿದ್ದಾರೆ. ವಿಜಯಪುರದಲ್ಲಿ 11,000 ಎಕರೆ ವಕ್ಫ್ ಆಸ್ತಿ ಎಂದು ಹೇಳಿದ್ದ ಸಚಿವರು ಈಗ 16,000 ಎಕರೆ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಇದೇ ಮುಂಬರುವ ನ.3ರ ಒಳಗೆ ರೈತರ ಪಹಣಿಯಲ್ಲಿ ವಕ್ಫ್ ಎಂದು ನಮದಾಗಿದ್ದನ್ನು ತೆಗೆಯಬೇಕು. ಇಲ್ಲವಾದರೆ ಉಗ್ರ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್‌ಗೆ ಎಚ್ಚರಿಕೆ ನೀಡುತ್ತೇನೆ. ವಕ್ಫ್ ವಿಚಾರದಲ್ಲಿ ಡಿಸಿ ನೇತೃತ್ವದ ಟಾಸ್ಕಪೋರ್ಸ್ ರಚನೆ ಮಾಡಿರುವ ಜಿಲ್ಲಾ ಉಸ್ತುವಾರಿ ಸಚಿವರ ಕ್ರಮಕ್ಕೆ ಸ್ವಾಗತ. ಆದರೆ ನ.3ರ ಒಳಗೆ ರೈತರ ಪಹಣಿಯಲ್ಲಿದ್ದ ವಕ್ಫ್ ಎಂದು ನಮೂದಾಗಿರುವುದನ್ನು ತೆಗೆಯಬೇಕು. ವಿಜಯಪುರದಲ್ಲಿ ಡಿಸಿ ಆಫೀಸ್ ಸೇರಿದಂತೆ ಹಲವಾರು ಸರ್ಕಾರಿ ಕಚೇರಿಗಳು ವಕ್ಫ್ ಎಂದು ಆಗಿವೆ. ಇವೆಲ್ಲ ತೆರವು ಆಗಬೇಕು. ವಕ್ಫ್ ಎಂದು ನಮೂದಾಗಿರುವುದನ್ನು ತೆಗೆಯದಿದ್ದರೆ, ಏನಾದರೂ ಅನಾಹುತವಾದರೆ ಅದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಜಮೀರ್ ಅಹ್ಮದ್ ಖಾನ್ ಹೊಣೆ ಎಂದು ಎಚ್ಚರಿಕೆ ನೀಡಿದರು.ಇದನ್ನೂ ಓದಿ: Tourism| ಕೇಂದ್ರದ ಯೋಜನೆಯಡಿ ಆಲಮಟ್ಟಿ, ಹರಕಲ್ ಗ್ರಾಮಗಳ ಅಭಿವೃದ್ಧಿ